Advertisement

ನೀರು ಕೇಳಿದ ರೈತರಿಗೆ ಸಿಕ್ಕಿದ್ದು ಆಶ್ವಾಸನೆ

01:03 PM Sep 18, 2018 | Team Udayavani |

ರಾಯಚೂರು: ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಅಚ್ಚುಕಟ್ಟು ಪ್ರದೇಶದ ರೈತರ ನೀರಿನ ಸಮಸ್ಯೆ ಕುರಿತು ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ರೈತರಿಗೆ ನೀರು ಸಿಗದೆ ಮತ್ತದೆ ಹುಸಿ ಆಶ್ವಾಸನೆ ಸಿಕ್ಕಿತು. ಇದರಿಂದ ರೈತರು ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗುವಂತಾಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಧ್ಯಾಹ್ನ 1.30 ಆರಂಭವಾಗಬೇಕಿದ್ದ ಸಭೆ ಸಂಜೆ 4.30ಕ್ಕೆ ಶುರುವಾಯಿತು. ಆದರೂ ರೈತರು ತಮ್ಮ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಕಾದು ಕುಳತಿದ್ದರು. ಕೊನೆಗೂ ಸಭೆ ಶುರುವಾದಾಗ ಆರಂಭದಲ್ಲಿ ರೈತರಿಗೆ ಮಾತನಾಡಲು ಅವಕಾಶ ನೀಡಲಾಯಿತು. 

ಎಲ್ಲ ರೈತರ ಅಭಿಪ್ರಾಯ ಕೇಳಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಈಗ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದು ಕಷ್ಟ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಇದರಿಂದ ಪ್ರಸ್ತುತಕ್ಕೆ ಭುಗಿಲೆದ್ದ ನೀರಿನ ಸಮಸ್ಯೆಗೆ ಮಾತ್ರ ಶಮನ ಸೂತ್ರ ಗೊತ್ತಾಗಲಿಲ್ಲ.

ರೈತ ಮುಖಂಡ ವೀರನಗೌಡ, ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ನಾಲ್ಕು ವಿಭಾಗಗಳಿದ್ದು, ಆಯಾ ವಿಭಾಗಕ್ಕೆ
ಹಂಚಿಕೆಯಾದ ನೀರು ಸಮರ್ಪಕವಾಗಿ ವಿತರಣೆಯಾದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ. ಪೈಪ್‌ಲೈನ್‌ಗಳ ಅಳವಡಿಕೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಈ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದು, ಅದನ್ನು ಜಾರಿಗೊಳಿಸಿ. ನೀರಗಳ್ಳತನಕ್ಕೆ ಕಡಿವಾಣ ಹಾಕುವಂತೆ ನಡೆಸಿದ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದರು.

ರೈತ ಮುಖಂಡ ಅಮಿನ್‌ ಪಾಷಾ ದಿದ್ದಿಗಿ ಮಾತನಾಡಿ, ಕೊನೆ ಭಾಗಕ್ಕೆ ನೀರು ಸಿಗದಿರಲು ಮೇಲ್ಭಾಗದಲ್ಲಿ ನೀರಗಳ್ಳತನ ಹೆಚ್ಚಾಗಿರುವುದೇ ಕಾರಣ. ನೀರು ಯಾರು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಗೊತ್ತಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ. ಉಪಕಾಲುವೆಗಳಲ್ಲೂ ಅಕ್ರಮ ನೀರಾವರಿ ನಡೆಯುತ್ತಿದೆ. ಅಧಿಕಾರಿಗಳು ಲಂಚ ಪಡೆದು ಅಕ್ರಮಕ್ಕೆ ಉತ್ತೇಜನ ನೀಡುತ್ತಿದ್ದಾರೆ. ನಮಗಾಗುತ್ತಿರುವ ನಷ್ಟ ಹೇಗೆ ಭರಿಸುತ್ತೀರಿ ಎಂದು ಪ್ರಶ್ನಿಸಿದರು.

Advertisement

ಹೋರಾಟಗಾರ ಅಮರಣ್ಣ ಗುಡಿಹಾಳ ಮಾತನಾಡಿ, ನಮಗೆ ಸರ್ಕಾರದ ಯಾವುದೇ ಭಾಗ್ಯಗಳು ಬೇಡ. ದಯವಿಟ್ಟು ಕೃಷಿಗೆ ಸರಿಯಾಗಿ ನೀರು ಹರಿಸಿ ಸಾಕು. ಅದರೊಂದಿಗೆ ರೈತರಿಗೆ ಸರಿಯಾಗಿ 12 ಗಂಟೆ ವಿದ್ಯುತ್‌ ನೀಡದೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ ಎಂದರು.

ಹಿರಿಯ ಮುಖಂಡ ಶ್ಯಾಮಸುಂದರ ಕೀರ್ತಿ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ಸತತ 20 ವರ್ಷಗಳಿಂದ
ಜಿಲ್ಲಾಡಳಿತವನ್ನು ವಂಚಿಸುತ್ತಲೇ ಬರುತ್ತಿದ್ದಾರೆ. ವಾಸ್ತವದಲ್ಲಿ ಇರುವುದೇ ಒಂದು ಅವರು ಹೇಳುವುದೇ ಮತ್ತೂಂದು. ಪೈಪ್‌ ಲೈನ್‌ ಅಳವಡಿಕೆಯಲ್ಲಿ ನಡೆದ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮೊದಲು ಆ ಅಕ್ರಮ ಸರಿಪಡಿಸಿ ಅಂದಾಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ತಾಕೀತು ಮಾಡಿದರು.

ರೈತ ಸಿದ್ಧನಗೌಡ ನೆಲಹಾಳ ಮಾತನಾಡಿ, 1.20 ಲಕ್ಷ ಎಕರೆ ಪ್ರದೇಶದಲ್ಲಿ 600 ಕೋಟಿಗೂ ಅಧಿಕ ಬೆಳೆ ನಷ್ಟವಾಗಿದೆ. ಕೊನೆ ಭಾಗದ ರೈತರು ನಡೆಸದ ಹೋರಾಟಗಳಿಲ್ಲ, ನೀಡದ ಮನವಿಗಳಿಲ ಇನ್ನೂ ಎಷ್ಟು ದಿನ ಹೀಗೆ ನಾವು ಕಷ್ಟ ಎದುರಿಸಬೇಕು. ಮೇಲಿನವರು ನೀರು ಬಳಸಿದರೆ ಬಳಸಲಿ. ನಮಗೆ ಏನು ಪರಿಹಾರ ಸೂಚಿಸುತ್ತೀರಿ ತಿಳಿಸಿ ಎಂದರು. ಇದರ ಜತೆಗೆ ಎನ್‌ಆರ್‌ಬಿಸಿ ಕೊನೆ ಭಾಗದ ಸಮಸ್ಯೆ, ಕಾಲುವೆಗಳ ಆಧುನೀಕರಣ ಸೇರಿ ಹಲವು ಸಮಸ್ಯೆಗಳ ಬಗ್ಗೆ
ಸಭೆಯಲ್ಲಿ ರೈತರು ಪ್ರಸ್ತಾಪಿಸಿದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, 104 ಮೈಲ್‌ಗೆ ನೀರು ಬಂದಿಲ್ಲ. ಸಿಂಧನೂರು ಭಾಗದಲ್ಲಿ ಶೇ.60ರಷ್ಟು ಕೃಷಿಯಾದರೆ, ನಮ್ಮಲ್ಲಿ ಶೇ.30ರಷ್ಟಾಗಿದೆ. ಹೀಗಾದರೆ ನಮ್ಮನ್ನು ಗೆಲ್ಲಿಸಿದ ಜನರಿಗೆ ಹೇಗೆ ಮುಖ ತೋರಿಸಬೇಕು. ರೈತರಿಗಾಗಿ ಅಧಿಕಾರ ಕಳೆದುಕೊಳ್ಳಲು ಸಿದ್ಧ ಎಂದರು. ಇದಕ್ಕೆ ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡ, ನಗರ ಶಾಸಕ ಡಾ.ಶಿವರಾಜ್‌ ಪಾಟೀಲ ದನಿಗೂಡಿಸಿದರು. ಸಚಿವ ವೆಂಕಟರಾವ್‌ ನಾಡಗೌಡ, ಎಂಎಲ್‌ ಸಿಗಳಾದ ಎನ್‌.ಎಸ್‌.ಬೋಸರಾಜ್‌, ಬಸವರಾಜ್‌ ಪಾಟೀಲ್‌, ಶಾಸಕ ಪ್ರತಾಪ್‌ ಗೌಡ ಪಾಟೀಲ್‌, ಸೇರಿ ಅನೇಕರು ತಮ್ಮ ವ್ಯಾಪ್ತಿಯ ನೀರಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಸಚಿವ ಡಿ.ಕೆ.ಶಿವಕುಮಾರ, ಜಿಲ್ಲೆಯಲ್ಲಿ ನೀರಿನ ಅಕ್ರಮ ಬಳಕೆ ಬಗ್ಗೆ ಗಮನಕ್ಕಿದೆ. ಅದಕ್ಕೆಂದೇ ನೀರಗಳ್ಳತನಕ್ಕೆ ಕಡಿವಾಣ ಹಾಕಿಸಲು ವೀಡಿಯೋ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಎರಡು ಎಕರೆಯಿಂದ 10 ಎಕರೆವರೆಗೆ ಕೆರೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಅದರ ಜತೆಗೆ ಮುಖ್ಯವಾಗಿ ಮುಂಗಾರು ಹಂಗಾಮಿನಲ್ಲಿ ಎಷ್ಟು ಭತ್ತ ನಾಟಿ ಮಾಡಬೇಕೋ ಅದಕ್ಕಿಂತ ದುಪ್ಪಟ್ಟು ಮಾಡಲಾಗಿದೆ. 52 ಸಾವಿರ ಎಕರೆ ನಾಟಿ ಮಾಡುವಲ್ಲಿ 3 ಲಕ್ಷ ಎಕರೆ ಮಾಡಲಾಗಿದೆ. ಇದರಿಂದ ಕೆಳಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದರು. ಅಧಿ ಕಾರಿಗಳ ಜತೆ ಸಮಾಲೋಚಿಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಮಾನತು: ಡಿಕೆಶಿ 
ರಾಯಚೂರು: ನೀರಾವರಿ ಇಲಾಖೆಯಲ್ಲಿ ಖಾಲಿಯಿದ್ದ ಹುದ್ದೆಗಳ ಭರ್ತಿ ಮಾಡಿದ್ದು, 42 ಅಧಿಕಾರಿಗಳನ್ನು ನೇಮಿಸಲಾಗಿದೆ. ವಾರ ಗಡುವು ನೀಡಿದ್ದು, ಅಷ್ಟರೊಳಗೆ ಬಂದು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಮಾನತು ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಖಡಕ್‌ ಎಚ್ಚರಿಕೆ ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಗೊಂಡ ಅಧಿಕಾರಿಗಳಲ್ಲಿ ಬೇರೆ ಇಲಾಖೆಯಲ್ಲಿರುವವರೂ ಇದ್ದಾರೆ. ಅವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಕೇವಲ ಅಭಿವೃದ್ಧಿ ಇರುವ
ಕಡೆ ಕೆಲಸ ಮಾಡದಲ್ಲ. ರೈತರಿಗೆ ನೀರು ತಲುಪಿಸುವ ಅನಿವಾರ್ಯತೆ ಇದೆ. ಅವರು ಬಂದು ವರದಿ ಮಾಡಿಕೊಳ್ಳದಿದ್ದಲ್ಲಿ, ವಿಳಂಬ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ಕಡೆ ಅಚ್ಚುಕಟ್ಟು ಪ್ರದೇಶಗಳ ರೈತರ ಸಮಸ್ಯೆ ಬಹುತೇಕ ಒಂದೇ ಆಗಿದೆ. ಹೀಗಾಗಿ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಬೇರೆ ಕಡೆಯೂ ಅಭಿಪ್ರಾಯ ಸಂಗ್ರಹಿಸಲಾಗುವುದು. ತುಂಗಭದ್ರಾ, ಕಾವೇರಿ, ಕೃಷ್ಣಾ ವ್ಯಾಪ್ತಿಯ ರೈತರಿಗೆ ಬೇರೆ ಸಮಸ್ಯೆಗಳಿರುವುದಿಲ್ಲ. ಹೀಗಾಗಿ ಸಮಗ್ರ ರಾಜ್ಯಕ್ಕೆ ಅನ್ವಯವಾಗುವ ಹಾಗೆ ನಿಯಮ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಚಿನಿವಾರ ಸಮಿತಿ ವರದಿ ಅಧ್ಯಯನಕ್ಕೆ ಸಮಿತಿ ರಚಿಸಲಾಗುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆ
ನಡೆದಿದೆ. ಹೀಗಾಗಿ ಅಧ್ಯಯನಕ್ಕಾಗಿ ಅಧಿಕಾರಿಗಳ ಹಾಗೂ ನಿವೃತ್ತ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗುತ್ತದೆ. ಈ ಬಗ್ಗೆ ನಾನು ಖುದ್ದಾಗಿ ಕಾರ್ಯಾಗಾರ ಮಾಡುತ್ತೇನೆ. ರಾಜ್ಯದ ಎಲ್ಲ ಇಂಜಿನಿಯರ್‌ಗಳನ್ನು ಕರೆದು ಚರ್ಚಿಸುತ್ತೇನೆ ಎಂದರು.

ಜಿಲ್ಲೆಯಲ್ಲಿನ ಅಕ್ರಮ ನೀರಾವರಿಗೆ ಕಡಿವಾಣ ಹಾಕುವಂತೆ ರೈತರು ಲಿಖೀತ ದೂರು ನೀಡಿದ್ದಾರೆ. ಅದರ ಜತೆಗೆ ಮೂರೂ ಪಕ್ಷಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಲಿಖೀತ ರೂಪದಲ್ಲಿ ಬರೆದು ಕೊಡುವಂತೆ ಕೇಳಿದ್ದೇನೆ. ಈವರೆಗೆ ಜನಪ್ರತಿನಿಧಿಗಳು ಹಾಗೂ ರೈತರಿಂದ ಸಮಸ್ಯೆಗಳ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next