ಬೆಂಗಳೂರು: ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿ ಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಮತ್ತು ವ್ಯಾಪಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದೇ ಇರುವುದರಿಂದ ನೂರಾರು ಜನ ರೈತರು ಹಾಗೂ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಾರುಕಟ್ಟೆಗಳನ್ನು ಪುನಾರಂಭ ಮಾಡಬೇಕು ಎಂದು ಒತ್ತಾಯಿಸಿ ಕೆ.ಆರ್ ಮಾರುಕಟ್ಟೆ ವೃತ್ತದಿಂದ ಬಿಬಿಎಂಪಿ ಕಚೇರಿವರೆಗೂ ನೂರಾರು ರೈತರು, ವ್ಯಾಪಾರಿಗಳು ಸೋಮವಾರ ರ್ಯಾಲಿ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಇದೀಗ ದೇಶದೆಲ್ಲೆಡೆ ಅನ್‌ಲಾಕ್ ಮಾಡಲಾಗಿದೆ. ಆದರೆ, ಮಾರುಕಟ್ಟೆ ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ, ರೈತರು ಅರ್ಧ ಬೆಲೆಗೆ ತರಕಾರಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಕೋವಿಡ್ ತೀವ್ರಗೊಂಡಿದ್ದರಿಂದ 4 ತಿಂಗಳಿಂದ ಮಾರುಕಟ್ಟೆ ಬಂದ್ ಮಾಡಲಾಗಿದೆ. ಇದರಿಂದ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ನಷ್ಟವಾಗಿದೆ. ಇದು ಆಡಳಿತ ನಡೆಸುವವರಿಗೆ ಗೊತ್ತಾಗುತ್ತಿಲ್ಲವೇ? ಸ್ವತಃ ಮುಖ್ಯಮಂತ್ರಿಗಳು ಯಾವುದೇ ಲಾಕ್‌ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ, ರೈತರಿಗೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುನಾರಂಭಕ್ಕೆ ಅಗತ್ಯ ಸಿದ್ಧತೆ : ಕೆ.ಆರ್ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಪುನಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಮೂರು ಅಥವಾ ನಾಲ್ಕು ದಿನ ಅವಕಾಶ ಬೇಕು. ಎರಡೂ ಮಾರುಕಟ್ಟೆಗಳನ್ನು ಸ್ಯಾನಿಟೈಸ್ ಮಾಡಿ ಹಾಗೂ ಮಾರ್ಷಲ್‌ಗಳನ್ನು ನೇಮಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ತಿಳಿಸಿರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ನಂತರ ಮಾಹಿತಿ ನೀಡಿದರು. ಕೋವಿಡ್ ಸೋಂಕು ತಡೆಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡು, ಸೆ. 1ರಿಂದ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದು ಹುಸಿಯಾದರೆ, ಸೆ. 2ರಿಂದ ಯಾವುದೇ ಅನುಮತಿಗಾಗಿ ಕಾಯದೆ, ಸ್ವತಃ ನಾವೇ (ರೈತರು, ವ್ಯಾಪಾರಿಗಳು) ವ್ಯಾಪಾರ ಪ್ರಾರಂಭಿಸುತ್ತೇವೆ ಎಂದು ಎಚ್ಚರಿಸಿದರು.