ಬೆಂಗಳೂರು: ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ವಹಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಕರೆಯಲಾದ ಸಂಘದ ಕಾರ್ಯಕಾರಿ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗದೆ ಔಪಚಾರಿಕವಾಗಿ ಮುಕ್ತಾಯವಾಗುವ ಸಾಧ್ಯತೆ ಇದೆ.
ಸಂಘದಲ್ಲಿನ ಒಳಜಗಳಗಳಿಂದಾಗಿ ಒಂದು ಬಣದ ನಿರ್ದೇಶಕರು ಕಾರ್ಯಕಾರಿ ಸಮಿತಿ ಸಭೆ ಕರೆಯುವಂತೆ ಮನವಿ ಸಲ್ಲಿಸಿ ಆ ಸಭೆಯಲ್ಲಿ ಹಾಲಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದ್ದರು. ಆದರೆ ಇದಕ್ಕೆ ಬೆಟ್ಟೇಗೌಡ ಮತ್ತು ಇತರರು ಆಕ್ಷೇಪ ವ್ಯಕ್ತಪಡಿಸಿ, ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿದ್ದರು.
ಈ ನಡುವೆ ಮತ್ತೂಂದು ಬಣದ ನಿರ್ದೇಶಕರು ಫೆ.22ರಂದು ಪ್ರತ್ಯೇಕವಾಗಿ ಸಭೆ ನಡೆಸಿ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಸಜ್ಜಾಗಿದ್ದರು. ಆದರೆ ನ್ಯಾಯಾಲಯವು ಫೆ.22ರಂದು ಅವಿಶ್ವಾಸ ನಿರ್ಣಯ ಮಂಡಿಸಲು ಕರೆಯಲಾಗಿದ್ದ ಸಭೆಗೆ ತಡೆಯಾಜ್ಞೆ ನೀಡಿತ್ತು. ಈ ನಡುವೆ ಬೆಟ್ಟೇಗೌಡರು ಫೆ.28ಕ್ಕೆ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದರಿಂದ ಕುತೂಹಲ ಮೂಡಿಸಿತ್ತು.
ಫೆ.21ರಂದು ಆದಿಚುಂಚನಗಿರಿ ಮಠದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಆರ್.ಅಶೋಕ್ ಇತರರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಂಘದ 30 ನಿರ್ದೇಶಕರು ಪಾಲ್ಗೊಂಡಿದ್ದರು. ಈ ವೇಳೆ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಸ್ವಾಮೀಜಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ವಹಿಸಲು ನಿರ್ಧರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮಂಗಳವಾರದ ಸಭೆಯಲ್ಲಿ ಪ್ರಮುಖ ತೀರ್ಮಾನ ಏನೂ ಆಗುವುದಿಲ್ಲ ಎಂದು ಹೇಳಲಾಗಿದೆ.
ಮನವಿ ವಾಪಸ್: ಹಾಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಭೆ ಕರೆಯುವಂತೆ ಮನವಿ ಸಲ್ಲಿಸಿದವರ ಪೈಕಿ ನಾಲ್ಕು ಮಂದಿ ಈಗಾಗಲೇ ಮನವಿ ಹಿಂಪಡೆದಿದ್ದಾರೆ. ಹಾಗಾಗಿ ಅವಿಶ್ವಾಸ ನಿರ್ಣಯ ಮಂಡನೆಯ ಪ್ರಶ್ನೆಯೇ ಇಲ್ಲ. ಮಂಗಳವಾರ ಕಾರ್ಯಕಾರಿ ಸಮಿತಿ ಸಭೆ ಕರೆದಿರುವುದರಿಂದ ಅದನ್ನು ಸಭೆಯ ನಡಾವಳಿಯಲ್ಲಿ ದಾಖಲಿಸಿ ಮುಕ್ತಾಯಗೊಳಿಸಲಾಗುವುದು. ಸ್ವಾಮೀಜಿಗಳು ಸೇರಿ ಸಮುದಾಯದ ಮುಖಂಡರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಬೆಟ್ಟೇಗೌಡ ತಿಳಿಸಿದರು.
ಸದ್ಯದಲ್ಲೇ ನಿರ್ಧಾರ
ಒಕ್ಕಲಿಗರ ಸಂಘದ ನಿರ್ದೇಶಕರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಅವಿಶ್ವಾಸ ನಿರ್ಣಯ ಮಂಡಿಸುವ ಮನವಿಯನ್ನು ಹಿಂಪಡೆದಿದ್ದಾರೆ. ಹಾಗಾಗಿ ಮಂಗಳವಾರದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗದು. ಸಂಘದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಕೆಲವೇ ದಿನಗಳಲ್ಲಿ ಇತರೆ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.