Advertisement

ಭೂಮಿ ಹಸನು ಮಾಡಿ ಮಳೆಗಾಗಿ ಕಾದು ಕುಳಿತ ರೈತರು

03:38 PM Jun 17, 2023 | Team Udayavani |

ಬಜಪೆ: ರೈತರು ಭೂಮಿ ಯನ್ನು ಹಸನು ಮಾಡಿ ತರಕಾರಿ ಬೀಜ ಬಿತ್ತನೆಗೆ ಕೃಷಿಕ ತಯಾರಾಗಿ 15 ದಿನಗಳು ಕಳೆದಿವೆ. ಮಳೆಗಾಗಿ ಕಾದು ಕಾದು ಬಾರದಿರುವ ಕಾರಣ ಇನ್ನೂ ಅನಿಶ್ಚಿತೆಯಲ್ಲಿದ್ದಾರೆ ಬೆಳೆಗಾರರರು.

Advertisement

ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಬಿತ್ತನೆ ಆರಂಭವಾಗುತ್ತಿತ್ತು. ಈ ಬಾರಿ ಇನ್ನೂ ಆಗಿಲ್ಲ. ತರಕಾರಿ ಬೀಜ ಬಿತ್ತನೆಯ ಕಾರ್ಯ ಜೂನ್‌ ಮೊದಲ ವಾರದಲ್ಲಿಯೇ ನಡೆಯಬೇಕಾಗಿದ್ದು, 15 ದಿನಗಳ ಅನಂತರವೂ ಮಳೆ ಸಮರ್ಪಕ ವಾಗಿ ಸುರಿಯದ ಕಾರಣ ವಿವಿಧ ತರಕಾರಿ ಬೀಜಗಳನ್ನು ಬಿತ್ತನೆಗ ಸಿದ್ಧಗೊಳಿಸಿದ್ದ ಕೃಷಿಕನಿಗೆ ಸಂಕಷ್ಟ ಉಂಟಾಗಿದೆ.

ಬಜಪೆ ಆಡ್ಕಬಾರೆಯಲ್ಲಿ ತರಿಕಾರಿ ಕೃಷಿಕರು ಮಳೆಗಾಗಿ ಕಾಯುತ್ತಿದ್ದಾರೆ. ತರಕಾರಿ ಬೀಜ ಬಿತ್ತನೆಗೆ ಮಳೆ ಅಗತ್ಯ. ಬೀಜ ಬಿತ್ತನೆ ಮಾಡಿ ಬಳಿಕ ಮಳೆ ಬಾರದೇ ಇದ್ದರೆ ಅದಕ್ಕೆ ನೀರು ಹಾಕಿ ಬೆಳಸುವುದು ಕಷ್ಟ. ಯಾಕೆಂದರೆ ಇದರಿಂದ ಖರ್ಚು ಹೆಚ್ಚು. ಹಾಗಾಗಿ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕೃಷಿಕ ಅದಕ್ಕೆ ಕೈಹಾಕುವ ಸಾಧ್ಯತೆ ಇಲ್ಲ.

ನಾಗರಪಂಚಮಿ, ಅಷ್ಟಮಿ, ಚೌತಿ, ತೆನೆ ಹಬ್ಬ, ನವರಾತ್ರಿ ಹಬ್ಬವನ್ನು ಗಮನದಲ್ಲಿಟ್ಟು ಕೊಂಡು ಇಲ್ಲಿನ ಕೃಷಿಕರು ತರಕಾರಿ ಬೆಳೆ ಬೆಳೆಸುವುದು ವಾಡಿಕೆ. ಜೂನ್‌ ತಿಂಗಳಲ್ಲಿ ಬಿತ್ತನೆ ಮಾಡಿ ಆಗಸ್ಟ್‌ ಮೊದಲವಾರದಿಂದ ಹಬ್ಬಕ್ಕೆ ಬೆಂಡೆ, ಹರಿವೆ, ಹೀರೆ, ಮುಳ್ಳು ಸೌತೆ ಮೊದಲಾದ ತರಕಾರಿಗಳನ್ನು ಮಾರುಕಟ್ಟೆಗೆ ತರಲಾರಂಭಿಸುವುದು ಕಂಡು ಬರುತ್ತಿತ್ತು.

ಈ ಬಾರಿ ಹಬ್ಬಗಳೂ ತಡ
ಈ ಬಾರಿ ತರಕಾರಿ ಬೆಳೆಗಾರರಿಗೆ ಮಳೆ ತಡವಾದರೂ ಹಬ್ಬಗಳು ತಡವಾಗಿ ಆರಂಭವಾಗುವುದರಿಂದ ಕೊಂಚ ಸಮಾಧಾನ. ಈ ಬಾರಿ ಅಧಿಕ ಶ್ರಾವಣ ಮಾಸದಿಂದಾಗಿ ಎಲ್ಲವೂ ತಡವಾಗಿ ಬರಲಿದೆ. ಅಧಿಕ ಶ್ರಾವಣ ಮಾಸ ಜು. 18ರಿಂದ ಆರಂಭವಾಗಲಿದ್ದು, ಆ.16ರಂದು ಮುಕ್ತಾಯವಾಗಲಿದೆ.

Advertisement

ಆ. 17ರಿಂದ ನಿಜ ಶ್ರಾವಣ ಮಾಸ ಆರಂಭವಾಗಲಿದೆ. ಕಳೆದ ಬಾರಿ ಆ. 2ರಂದು ನಾಗರ ಪಂಚಮಿ ಹಬ್ಬ ಬಂದಿತ್ತು. ಈ ಬಾರಿ ಆ. 21ರಂದು ಬರಲಿದೆ. ಸೆ. 6ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಸೆ. 8ರಂದು ತೆನೆ ಹಬ್ಬ (ಕನ್ಯಾಮರಿಯಮ್ಮ ಜನ್ಮದಿನ), ಸೆ. 19ರಂದು ಗಣೇಶ ಚತುರ್ಥಿ, ಅ. 15ರಿಂದ ನವರಾತ್ರಿ ಆರಂಭವಾಗಲಿದೆ. ಇದರಿಂದ ತರಕಾರಿ ಬೆಳೆಗಾರರು ಕೊಂಚ ನಿರಾಳವಾಗಿದ್ದಾರೆ.

ಹಬ್ಬಗಳೇ ತರಕಾರಿ ಕೃಷಿಕರ ಅದಾಯದ ಮೂಲ ಹಬ್ಬಗಳ ಸಂದರ್ಭ ಊರಿನ ತರಕಾರಿಗೇ ಹೆಚ್ಚು ಬೇಡಿಕೆ. ಇದಕ್ಕಾಗಿ ಬಜಪೆ ಪರಿಸರದ ತರಕಾರಿ ಬೆಳೆಗಾರರು ಕುಮೇರಿಗಳನ್ನೇ ಆಯ್ಕೆ ಮಾಡಿ, ಎಕ್ರೆ ಗಟ್ಟಲೇ ತರಕಾರಿ ಬೆಳೆ ಮಾಡುತ್ತಾರೆ. ಅದರಲ್ಲೂ ತರಕಾರಿಯ ರಾಣಿ “ಬೆಂಡೆ’ಯನ್ನೇ ಬೆಳೆಸುತ್ತಾರೆ. ಬಜಪೆಯ ಬೆಂಡೆ ಪ್ರಸಿದ್ಧಿಯನ್ನು ಪಡೆದ ಕಾರಣ ಇದಕ್ಕೆ ಎಲ್ಲಿಲ್ಲದ ಬೇಡಿಕೆ. ಕೆ.ಜಿ.ಗೆ 250 ರೂ. ವರೆಗೆ ಮಾರಾಟವಾದದ್ದು ಇದೆ. ಹರಿವೆ, ಹೀರೆ, ಮುಳ್ಳುಸೌತೆಗೆ ಹೆಚ್ಚು ಪ್ರಾಮುಖ್ಯವನ್ನು ನೀಡಲಾಗುತ್ತದೆ. ಇದು ಬಜಪೆ ಕೃಷಿಕರ ಆದಾಯದ ಮೂಲ ವಾಗಿದೆ. ಇದನ್ನು ನಂಬಿ ಹಲವಾರು ಕುಟುಂಬಗಳು ಜೀವನ ನಡೆಸುತ್ತಿವೆ. ಈಗ ಕೃಷಿಗೆ ಕಾರ್ಮಿಕರ ಕೊರತೆಯೂ ಕಾಡುತ್ತಿದೆ. ಇದರಿಂದ ಭೂಮಿ ಹಸನು ಮಾಡಲು ಯಂತ್ರವನ್ನೇ ಬಳಸುತ್ತಿದ್ದಾರೆ.

ಬಿಸಿಲಿನಿಂದ ಮೊಳಕೆಗೆ ಹಾನಿ
ಮಳೆ ಬಂದು ಒಮ್ಮೆಲೇ ಬಿಸಿಲು ಬಂದಾಗ ಮೊಳಕೆ ಬಂದ ಬೀಜಕ್ಕೆ ಹಾನಿಯಾಗುತ್ತದೆ. ಇದರಿಂದ ಸರಿಯಾಗಿ ಮಳೆ ಶುರು ಆದ ಮೇಲೆಯೇ ಬೀಜ ಬಿತ್ತನೆಯ ಮಾಡಲಾಗುತ್ತದೆ. ಹಬ್ಬದ ಸಂದರ್ಭಕ್ಕೆ ಅನುಗುಣವಾಗಿ ತರಕಾರಿ ಕೃಷಿ ಮಾಡಲಾಗುತ್ತದೆ. ಹಬ್ಬದ ಮೊದಲು ತರಕಾರಿ ಮಾರುಕಟ್ಟೆಯಲ್ಲಿ ಇದ್ದರೆ ಅದಕ್ಕೆ ಒಳ್ಳೆಯ ದರ ಸಿಗುತ್ತದೆ. ಈಗಾಗಲೇ ಹರಿವೆ ಗಿಡ ನೆಡಲಾಗಿದೆ. ಆದರೆ ಮಳೆ ಬಾರದೆ ಬಾಡಿ ಹೋಗಿದೆ.
-ರೋಹಿತ್‌,
ಕೃಷಿಕ, ಪಡುಪೆರಾರ ಪಡೀಲ್‌,

– ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next