Advertisement

ರೈತರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಬಲ?

06:00 AM Dec 26, 2017 | Harsha Rao |

ಹೊಸದಿಲ್ಲಿ: ರೈತರು ಬೆಳೆದ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೂ ಬೆಳೆಗಳ ದರವು ಅದಕ್ಕಿಂತಲೂ ಕಡಿಮೆಯಾದರೆ ಅಂಥ ಸಂದರ್ಭದಲ್ಲಿ ರೈತರ ನೆರವಿಗೆ ಕೇಂದ್ರ ಸರಕಾರವೇ ಧಾವಿಸಲಿದೆ. ಇಂಥ ಒಂದು ವಿಶೇಷ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಕೇಂದ್ರ ಸರಕಾರ ಒಂದು ತಿಂಗಳ ಹಿಂದೆಯೇ ಕರ್ನಾಟಕ ಸಹಿತ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದೆ.

Advertisement

“ಮಾರುಕಟ್ಟೆ ಭರವಸೆ ಯೋಜನೆ’ ಎಂಬ ಪ್ರಸ್ತಾವಿತ ಯೋಜನೆಯ ಅನ್ವಯ ರಾಜ್ಯಗಳು ರೈತರು ಬೆಳೆದ ಎಲ್ಲ ರೀತಿಯ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿ ಖರೀದಿಸಲು ಅಧಿಕಾರ ಹೊಂದಿವೆ. ಈ ಪಟ್ಟಿಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ಹೊರತುಪಡಿಸಲಾಗಿದೆ. ಏಕೆಂದರೆ ಕೇಂದ್ರ ಸರಕಾರವೇ ಸಾರ್ವಜನಿಕ ವಿತರಣ ವ್ಯವಸ್ಥೆ ಅಡಿ ಇವುಗಳನ್ನು ಖರೀದಿಸುತ್ತಿದೆ. ಹೊಸ ವ್ಯವಸ್ಥೆ ಪ್ರಕಾರ, ರಾಜ್ಯ ಸರಕಾರಗಳಿಗೆ ಖರೀದಿ ಸಂದರ್ಭದಲ್ಲಿ ನಷ್ಟ ಉಂಟಾದರೆ ಅದರ ಶೇ.30ರಷ್ಟು ಮೊತ್ತವನ್ನು ಕೇಂದ್ರವೇ ಭರಿಸಲಿದೆ. ಖರೀದಿ ಮಾಡಿದ ಬೆಳೆಯನ್ನು ಸರಿಯಾದ ರೀತಿಯಲ್ಲಿ ವಿತರಣೆ ಮತ್ತು ವಿನಿಯೋಗಿಸುವುದು ರಾಜ್ಯ ಸರಕಾರಗಳ ಹೊಣೆ ಯಾಗಿದೆ. ಇದರಿಂದಾಗಿ ರೈತರಿಗೆ ನಿಗದಿತ ಮೊತ್ತ ಖಚಿತವಾಗಿ ಸಿಗುತ್ತದೆ. ಒಂದು ವೇಳೆ ಇದು ಯಶಸ್ವಿಯಾದರೆ ವಿಶೇಷವಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಬಹುವಾಗಿ ನೆರವಾಗಲಿದೆ.

ಕಳೆದ 2 ವರ್ಷಗಳಿಂದ ದೇಶದ ಹಲವು ಭಾಗಗಳಲ್ಲಿ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟ, ಬೆಳೆ ಕೈಸೇರಿದ ಬಳಿಕ ರೈತರಿಗೆ ಸೂಕ್ತ ಬೆಲೆ ಸಿಗದೇ ಇದ್ದುದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿವೆ.

ಗುಜರಾತ್‌ನಲ್ಲಿ ಹಿನ್ನಡೆ: ಕೆಲವು ದಿನಗಳ ಹಿಂದಷ್ಟೇ ಮುಕ್ತಾಯವಾದ ಗುಜರಾತ್‌ ವಿಧಾನಸಭೆ ಚುನಾವಣೆ ಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ರೈತರಿಂದ ಬಿಜೆಪಿಗೆ ಕಡಿಮೆ ಮತ ಬಿದ್ದಿರುವುದು ಗಮನಾರ್ಹವಾಗಿದೆ. ಆದರೆ ಫ‌ಲಿತಾಂಶಕ್ಕೂ ಮುನ್ನವೇ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿರುವುದು ರೈತರ ಓಲೈಕೆಯ ತಂತ್ರಗಾರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ಏನಿದೆ ನಿಯಮ?: ಹಾಲಿ ಇರುವ ನಿಯಮ ಪ್ರಕಾರ ಕೇಂದ್ರ ಸರಕಾರ ಅಕ್ಕಿ ಮತ್ತು ಗೋದಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌)ಯಲ್ಲಿ ವಿತರಿಸಲು ಖರೀದಿಸುತ್ತದೆ. ಜತೆಗೆ ಸಣ್ಣ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನೂ ಖರೀದಿಸುತ್ತದೆ.

Advertisement

ಯಾಕೆ ಈ ಯೋಜನೆ?: 2016-17ನೇ ಸಾಲಿನ ಬೆಳೆ ವರ್ಷ (ಕ್ರಾಪ್‌ ಇಯರ್‌)ದಲ್ಲಿ ದಾಖಲೆ ಪ್ರಮಾಣದಲ್ಲಿ ಬೇಳೆ-ಕಾಳುಗಳು ಮತ್ತು ಇತರ ಆಹಾರ ಧಾನ್ಯಗಳು ಉತ್ಪಾದನೆಯಾಗಿದ್ದವು. ಹೀಗಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಮಾರುಕಟ್ಟೆಯಲ್ಲಿ ಲಭ್ಯವಾಯಿತು. ಹೀಗಾಗಿ ದೇಶದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next