ಹಾವೇರಿ: ರೈತ ಹುತಾತ್ಮರ ದಿನಾಚರಣೆ (38ನೇ ವರ್ಷದ)ನಿಮಿತ್ತ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಜು. 21ರಂದು ನಗರದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ಹಾಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ಮಂಗಳವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಕುರಿತು ಮಾಹಿತಿ ನೀಡಿದರು. ಅಂದು ಬೆಳಗ್ಗೆ 11ಗಂಟೆಗೆ ಹುಕ್ಕೇರಿಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದ್ದು ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಇರುವ ಹುತಾತ್ಮ ರೈತಗಲ್ಲುಗಳಿಗೆ ನಮಸ್ಕರಿಸಿ, ಸಮಾವೇಶ ನಡೆಯುವ ಮುನ್ಸಿಪಲ್ ಮೈದಾನಕ್ಕೆ ಬರಲಿದೆ ಎಂದು ತಿಳಿಸಿದರು.
ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ಅನ್ನದಾತರನ್ನು ಋಣಮುಕ್ತರನ್ನಾಗಿ ಮಾಡಬೇಕು. ರೈತರ ಸಾಲ ಎಂದರೆ ಅದು ಸಮಾಜದ, ದೇಶದ ಸಾಲವಾಗಿದೆಯೇ ಹೊರತು ರೈತರ ವೈಯಕ್ತಿಕ ಸಾಲವಲ್ಲ. ಒಂದು ಬಾರಿ ಸರ್ಕಾರ ರೈತರ ಎಲ್ಲ ಸಾಲ ಮನ್ನಾ ಮಾಡಿ, ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಕೊಟ್ಟರೆ ಸಾಲ ಮನ್ನಾ ಎಂಬ ಬೇಡಿಕೆಯನ್ನು ಸಂಘದ ಬೇಡಿಕೆ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗುವುದು ಎಂದರು.
ಡಾ| ಸ್ವಾಮಿನಾಥನ್ ಸೂತ್ರದಂತೆ ಕನಿಷ್ಠ ಬೆಂಬಲಬೆಲೆ ಘೋಷಿಸಬೇಕು. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕು. ನೀರಿನ ಉಳಿತಾಯ ಮಾಡಲು ಶೇ. 100ರಷ್ಟು ಹನಿನೀರಾವರಿ ಯೋಜನೆ ಜಾರಿಗೆ ತರಬೇಕು. ಬರಗಾಲ ಪ್ರದೇಶದ ರೈತರಿಗೆ ಒಂದು ಎಕರೆಗೆ ಕನಿಷ್ಠ 25 ಸಾವಿರ ರೂ. ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.
ರಾಜ್ಯದ ಕೈಮಗ್ಗ ಮತ್ತು ಯಾಂತ್ರೀಕೃತ ಮಗ್ಗಗಳಿಗೆ ಮಾಡಿರುವ ಸಾಲ ಸಂಪೂರ್ಣ ಮನ್ನಾ, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ನೀಡಿರುವ ಎಲ್ಲ ಸಾಲಮನ್ನಾ ಮಾಡಬೇಕು. ಬಡ್ಡಿರಹಿತ ಸಾಲ ನೀಡಬೇಕು. ರಾಜ್ಯದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ರಾಜ್ಯದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ನಿಲ್ಲಿಸಿ, ರೈತರ ಪಂಪ್‌ಸೆಟ್ ಗಳಿಗೆ ಪ್ರತಿದಿನ 15 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸಮಾವೇಶದ ಮೂಲಕ ಹಕ್ಕೊತ್ತಾಯ ಮಾಡಲಾಗುವುದು ಎಂದರು.
ನಮ್ಮ ರೈತರ ಸಂಘ ಹೋರಾಟ, ಸಮಾವೇಶ ಮಾಡಲು ರೈತರಿಂದ 50, 100ರೂ. ಪಡೆದಿದ್ದೇವೆ. ಆದರೆ, ಅದನ್ನು ದುರುಪಯೋಗ ಮಾಡಿಕೊಂಡಿಲ್ಲ. ಲೆಕ್ಕಪತ್ರ ಇಟ್ಟು ಅದನ್ನು ಪಡೆದುಕೊಂಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಮಾಲತೇಶ ಪೂಜಾರ, ಕೆ. ಮುನಿಯಪ್ಪ, ಕುರುವ ಗಣೇಶ, ಚನ್ನಬಸಪ್ಪ ಪೂಜಾರ, ರವೀಂದ್ರಗೌಡ ಪಾಟೀಲ, ಜಯಶ್ರೀ ಗುರಣ್ಣನವರ, ಮಲ್ಲಿಕಾರ್ಜುನ ದಾವಣಗೆರೆ, ಹನುಮಂತಪ್ಪ ಹುಚ್ಚಣ್ಣನವರ ಇತರರಿದ್ದರು.