ಬೆಂಗಳೂರು: ಮಹದಾಯಿ ಬಿಕ್ಕಟ್ಟು ಬಗೆಹರಿಸುವಂತೆ ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ರೈತರು ಮಲ್ಲೇಶ್ವರದ ಬಿಜೆಪಿ ಕಚೇರಿ ಮುಂದೆ ಶನಿವಾರದಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಮುಂದುವರಿದಿದ್ದು, ಭಾನುವಾರ ಆಮ್ ಆದ್ಮಿ ಪಕ್ಷ ಮತ್ತು ಜನ ಸಾಮಾನ್ಯರ ವೇದಿಕೆ ಬೆಂಬಲ ವ್ಯಕ್ತಪಡಿಸಿ ಧರಣಿಗೆ ಕೈಜೋಡಿಸಿವೆ.
ಬಿಜೆಪಿ ಕಚೇರಿ ಎದುರು ಮಹಿಳೆಯರು, ಮಕ್ಕಳು, ಯುವಕರೊಂದಿಗೆ ಶನಿವಾರದಿಂದ ಧರಣಿ ಆರಂಭಿಸಿರುವ ರೈತರು ರಾತ್ರಿ ಚಳಿಯಲ್ಲಿ ನಡುಗುತ್ತಾ ತಮ್ಮ ಹೋರಾಟ ಮುಂದುವರಿಸಿದ್ದು, ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಮಗೆ ಮಹದಾಯಿ ನದಿಯ ನೀರು ಬೇಕೆ ಹೊರತು ಈ ಬಗ್ಗೆ ಸರ್ಕಾರ ಅಥವಾ ರಾಜಕೀಯ ಮುಖಂಡರಿಂದ ಪೊಳ್ಳು ಭರವಸೆ ಬೇಕಾಗಿಲ್ಲ. ಮಹದಾಯಿ ನದಿ ನೀರು ಬಿಡಲು ಗೋವಾ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರಾದರೂ ನೀರು ಯಾವಾಗಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಅವರಿಂದ ಸ್ಪಷ್ಟ ಉತ್ತರಕ್ಕಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ಹೇಳಿದ್ದು, ಈ ಭರವಸೆ ಸಿಗುವವರೆಗೂ ಇಲ್ಲೇ ಕುಳಿತುಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಚಳಿಯಲ್ಲೇ ರಾತ್ರಿ ಧರಣಿ ಮುಂದುವರಿಸಿದ್ದರಿಂದ ಸ್ಥಳೀಯರು ಅವರಿಗೆ ಹೊದಿಕೆಗಳನ್ನು ನೀಡಿದರಾದರೂ ರೈತರು ನಯವಾಗಿಯೇ ತಿರಸ್ಕರಿಸಿದರು. ಡಾ.ರಾಜ್‌ಕುಮಾರ್ ಅಭಿಮಾನ ದೇವರಾಜ್ ಎಂಬುವರು ಹೋರಾಟನಿರತರಿಗೆ ಬನ್ ಮತ್ತು ಚಹಾ ವಿತರಿಸಿದರು.
ಭಾನುವಾರ ಬೆಳಗ್ಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಜನ ಸಾಮಾನ್ಯರ ವೇದಿಕೆ ಅಧ್ಯಕ್ಷ$ಡಾ. ಅಯ್ಯಪ್ಪ, ಧರಣಿ ಎಷ್ಟು ದಿನ ಮುಂದುವರಿದರೂ ಅಷ್ಟೂ ದಿನವೂ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಜನ ಸಾಮಾನ್ಯ ವೇದಿಕೆ ಸಿದ್ದವಾಗಿದೆ ಎಂದು ಹೇಳಿದರು.
ಇನ್ನೊಂದೆಡೆ ಸಂಜೆ ವೇಳೆ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಕರ್ನಾಟಕಕ್ಕೆ ಮಹದಾಯಿ ನದಿಯಿಂದ ನೀರು ತರಿಸುವ ವಿಚಾರದಲ್ಲಿ ಯಡಿಯೂರಪ್ಪ ಅವರು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.