ತೆಲಸಂಗ: ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಆನ್‌ಲೆ„ನ್ ಅರ್ಜಿ ಆ್ಯಪ್ ಪ್ರಸಕ್ತ ವರ್ಷ ಮರುವಿನ್ಯಾಸಗೊಳಿಸಿದ್ದರಿಂದ ರೈತರು ವಿಮೆ ಭರಿಸಲು ಪರದಾಡುವಂತಾಗಿದೆ.
ಪಹಣಿ ಪತ್ರದಲ್ಲಿನ ಹೆಸರು, ಆಧಾರ ಕಾರ್ಡ್‌ಲ್ಲಿನ ಹೆಸರಲ್ಲಿ ಸ್ವಲ್ಪವೇ ವ್ಯತ್ಯಾಸವಿದ್ದರೂ ವಿಮೆ ಅರ್ಜಿ ತಿರಸ್ಕಾರಗೊಳ್ಳುತ್ತಿದೆ. ರೈತರು ಈ ತೊಂದರೆಯಿಂದ ವಿಮೆ ಭರಿಸಲಾಗದೆ ವಂಚಿತರಾಗುತ್ತಿದ್ದಾರೆ. ಜೂನ.30 ವಿಮೆ ಭರಿಸಲು ಕೊನೆಯ ದಿನವಾದ್ದರಿಂದ ಆದಷ್ಟು ಬೇಗ ಈ ತಾಂತ್ರಿಕ ತೊಂದರೆ ಬಗೆಹರಿಯಬೇಕಿದೆ. ಅರ್ಜಿಗಳು ರಿಜೆಕ್ಟ್ ಆಗುತ್ತಿರುವುದರಿಂದ ರೈತರು ಅ ಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ರವಿವಾರ ಇಡಿ ದಿನ ಕೇವಲ ಒಬ್ಬ ರೈತನ ಅರ್ಜಿ ಮಾತ್ರ ಸ್ವೀಕೃತಗೊಂಡಿದೆ.
ಏನಿದು ಸಮಸ್ಯೆ: ಉದಾಹರಣೆಗೆ ಭೂಮಿಯ ಪಹಣಿ ಪತ್ರದಲ್ಲಿ ಕಾರಪ್ಪಗೋಳ ಕಲ್ಲಪ್ಪ ಮಲ್ಲಪ್ಪ ಎಂದು ಹೆಸರಿದ್ದು, ಆಧಾರ ಕಾರ್ಡ್‌ನಲ್ಲಿ ಕಲ್ಲಪ್ಪ ಮಲ್ಲಪ್ಪ ಕಾರಪ್ಪಗೋಳ ಎಂದಿದ್ದರೆ ಈ ಎರಡೂ ಹೆಸರಿನ ವ್ಯಕ್ತಿ ಒಬ್ಬನೇ ಇದ್ದರೂ ಆನ್‌ಲೈನ್‌ದಲ್ಲಿ ವಿಮೆ ಭರಿಸಲು ಹೆಸರು ಮ್ಯಾಚ್ ಆಗದೆ ತಿರಸ್ಕಾರಗೊಳ್ಳುತ್ತಿದೆ. ಪಹಣಿಯಲ್ಲಿನ ಹೆಸರು ತಿದ್ದುಪಡಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಪಹಣಿಯಲ್ಲಿ ಅಡ್ಡ ಹೆಸರು ಮೊದಲು ನಂತರ ಫಲಾನುಭವಿ ಹೆಸರು ಅನಂತರ ತಂದೆಯ ಹೆಸರು ಇರುತ್ತದೆ. ಆಧಾರ್ ದಲ್ಲಿ ಮೊದಲು ಫಲಾನುಭವಿ ಹೆಸರು, ನಂತರ ತಂದೆಯ ಹೆಸರು, ಅನಂತರ ಅಡ್ಡಹೆಸರು ಇರುತ್ತದೆ. ಇದು ಸಮಸ್ಯೆಗೆ ಕಾರಣವಾಗಿದೆ.
ಹೀಗಾಗಬೇಕಿದೆ: ಈ ಹಿಂದೆ ಪಹಣಿ ಮತ್ತು ಆಧಾರ್ ದಲ್ಲಿ ಹೆಸರುಗಳು ಹಿಂದೆ ಮುಂದೆ ಆಗಿದ್ದರೂ ಒಂದೇ ಹೆಸರಿನ ವ್ಯಕ್ತಿ ಎಂದು ಪರಿಗಣಿಸಲಾಗುತ್ತಿತ್ತು. ಪಹಣಿಗೆ ಆಧಾರ ಲಿಂಕ್ ಇರುವುದರಿಂದ ಹೆಸರು ಮತ್ತು ಭೂಮಿಯ ಸರ್ವೇ ನಂಬರ್ ನಮೂದಾಗಿದ್ದರೆ ಸಾಕಾಗುತ್ತಿತ್ತು. ಈಗಲೂ ಆನ್ ಲೆ„ನ್ ಅರ್ಜಿ ಆ್ಯಪ್‌ಲ್ಲಿ ಮೊದಲಿನಂತೆ ಸಡಲಿಕೆ ಆಗಬೇಕು. ಇಲ್ಲವಾದಲ್ಲಿ ಪಹಣಿ ಮತ್ತು ಆಧಾರ್ ದಲ್ಲಿನ ಹೆಸರುಗಳನ್ನು ಸರಿ ಮಾಡಿಕೊಳ್ಳುವ ಅನುಕೂಲವನ್ನಾದರೂ ತಕ್ಷಣ ಮಾಡಿಕೊಡಬೇಕಿದೆ.
ರೈತರಿಂದ ದೂರುಗಳು ಬರುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಎಫ್‌ಐಡಿ ಲಿಂಕ್ ಪಹಣಿ ಹಾಗೂ ಆಧಾರ್‌ದಲ್ಲಿನ ಹೆಸರು ವ್ಯತ್ಯಾಸದಿಂದ ಅರ್ಜಿ ಸ್ವೀಕೃತವಾಗುತ್ತಿಲ್ಲ. ಒಂದೆರೆಡು ದಿನದಲ್ಲಿ ಪರಿಹಾರ ಸಿಗಬಹುದು. –
ಅಕ್ಷಯಕುಮಾರ ಉಪಾಧ್ಯೇಯ, ಕೃಷಿ ಅಧಿಕಾರಿ, ತೆಲಸಂಗ.
ಎಲ್ಲ ದಾಖಲಾತಿಗಳಲ್ಲಿನ ಹೆಸರುಗಳು ಹೀಗೆಯೇ ಇರಬೇಕು ಅಂತ ಆದೇಶ ಹೊರಡಿಸಿ ಸರಿಪಡಿಸುವ ಕೆಲಸ ಸರಕಾರದಿಂದ ನಡೆಯಬೇಕು. ತಾಂತ್ರಿಕ ತೊಂದರೆ ಸರಿಮಾಡದಿದ್ದರೆ ಒಬ್ಬನೇ ಒಬ್ಬ ರೈತನೂ ವಿಮೆ ಭರಿಸಲು ಸಾಧ್ಯವಾಗುವುದಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ತಕ್ಷಣದಿಂದ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. –
ಬಸವರಾಜ ಅಸ್ಕಿ, ರೈತ, ಕನ್ನಾಳ
-ಜೆ.ಎಮ್.ಖೊಬಿ