Advertisement

ರಾಗಿ ಖರೀದಿ ಕೇಂದ್ರದಲ್ಲಿ ನೂಕು ನುಗ್ಗಲು

02:42 PM Apr 26, 2022 | Team Udayavani |

ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಆವರಣದಲ್ಲಿ ಆಹಾರ ಮಟ್ಟು ನಾಗರಿಕ ಸರಬರಾಜು ಇಲಾಖೆಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವ ರಾಗಿ ಖರೀದಿ ನೋಂದಣಿ ಕೇಂದ್ರಕ್ಕೆ ಭಾನುವಾರ ರಾತ್ರಿಯಿಂದಲೇ ನೂರಾರು ರೈತರು ಆಗಮಿಸಿದ್ದರು. ಬೆಳಗಿನ ವೇಳೆಗೆ ನೂಕು ನುಗ್ಗಲು ಉಂಟಾಗಿ, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Advertisement

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 2021-22ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 6 ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ನಿಯಮಾನುಸಾರ ಫ್ರೂಟ್ಸ್‌ ತಂತ್ರಾಶದಲ್ಲಿ ನೋಂದಾಯಿಸಿಕೊಂಡಿರುವ ರೈತರಿಂದ ರಾಗಿ ಖರೀದಿ ಮಾಡಲಾಗಿದೆ. ಕಳೆದ ಮಾರ್ಚ್‌ 31ರ ಅಂತ್ಯಕ್ಕೆ ಜಿಲ್ಲೆಯ 4,148 ರೈತರಿಂದ ಒಟ್ಟು 59,772.00 ಕ್ವಿಂಟಲ್‌ ರಾಗಿ ಖರೀದಿ ಮಾಡಲಾಗಿದೆ.

ಹೆಚ್ಚುವರಿ ರಾಗಿ ಖರೀದಿಸುವಂತಿಲ್ಲ: ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್‌ವರೆಗೆ ಮಾತ್ರ ಖರೀದಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿಯನ್ನು ಖರೀದಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ರಾಗಿ ಖರೀದಿ ಕುರಿತಂತೆ ರಾಜ್ಯ ಸರ್ಕಾರ ಏ.19ರಂದು ಆದೇಶ ಹೊರಡಿಸಿದೆ.

ಈ ಆದೇಶದಂತೆ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ ರಾಗಿ ಮಾರಾಟ ಮಾಡಿರುವ ರೈತರನ್ನು ಹೊರತುಪಡಿಸಿ, ಇನ್ನುಳಿದ ರಾಗಿ ಬೆಳೆದ ಅರ್ಹ ರೈತರಿಂದ ಪ್ರತಿ ಕ್ವಿಂಟಲ್‌ಗೆ 3377 ರೂ. ದರದಲ್ಲಿ ರಾಜ್ಯ ಸರ್ಕಾರವು ರಾಗಿ ನೋಂದಣಿ ಮತ್ತು ಖರೀದಿಗೆ ಅವಕಾಶ ನೀಡಿದೆ.

ಟೋಕನ್‌ ವ್ಯವಸ್ಥೆ ಜಾರಿ: ಸೋಮವಾರ ಬೆಳಗ್ಗೆ ಸಾವಿರಾರು ರೈತರು ಎಪಿಎಂಸಿ ಆವರಣಕ್ಕೆ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಶಾಸಕ ಟಿ.ವೆಂಕಟರಮಣಯ್ಯ, ತಹಶೀಲ್ದಾರ್‌ ಮೋಹನ ಕುಮಾರಿ ಸ್ಥಳಕ್ಕೆ ಭೇಟಿ ನೀಡಿ, ರೈತರ ನೂಕು ನುಗ್ಗಲು ತಪ್ಪಿಸಲು ಟೋಕನ್‌ ವ್ಯವಸ್ಥೆ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಎರಡು ಸಾವಿರ ರೈತರಿಗೆ ಟೋಕನ್‌ ನೀಡಲಾಗಿದ್ದು, ಮಂಗಳವಾರ ಒಂದು ಸಾವಿರ, ಬುಧವಾರ ಒಂದು ಸಾವಿರ ರೈತರಿಗೆ ಇಂಡೆಂಟ್‌ ನೀಡುವ ಪ್ರಕ್ರಿಯೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ರೈತರೊಂದಿಗೆ ರಸ್ತೆ ತಡೆ ನಡೆಸಿದ ಶಾಸಕ: ಭಾನುವಾರ ರಾತ್ರಿಯಿಂದಲೇ ಸಾವಿರಾರು ರೈತರು ಎಪಿಎಂಸಿಗೆ ಲಗ್ಗೆ ಹಾಕಿದ್ದರು. ಆದರೆ, ನೋಂದಣಿ ಪ್ರಕ್ರಿಯೆಗೆ ಸರ್ವರ್‌ ಓಪನ್‌ ಆಗದ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಪ್ರಯತ್ನ ನಡೆಸಿದ ಅಧಿಕಾರಿಗಳು, ಏ.28ರ ನಂತರ ನೋಂದಣಿ ಮಾಡುವುದಾಗಿ ತಿಳಿಸಿದರು. ಇದರಿಂದ ರೈತರು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮತ್ತೆ ಗೊಂದಲ ಮುಂದುವರಿದಿದ್ದು, ಮಧ್ಯಾಹ್ನದವರೆಗೂ ಸಾಲುಗಟ್ಟಿ ನಿಂತರು ನೋಂದಣಿಯಾಗದ ಕಾರಣ ಬೇಸತ್ತ ರೈತರು, ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಎಪಿಎಂಸಿ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿದರು. ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳದೆ ಖರೀದಿ ಮಾಡಲು ನೋಂದಣಿ ಮಾಡುವುದಾಗಿ ತಿಳಿಸಿ, ರೈತರ ಸಮಯವನ್ನು ವ್ಯರ್ಥ ಮಾಡುತ್ತಿರುವ ಸರ್ಕಾರದ ವಿರುದ್ಧ ಎಪಿಎಂಸಿ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಮೋಹನಕುಮಾರಿ ಮತ್ತು ಡಿವೈಎಸ್‌ಪಿ ನಾಗರಾಜ್‌ ಅವರು, ಶಾಸಕರು ಹಾಗೂ ರೈತರಿಗೆ ನೋಂದಣಿಗೆ ಎದುರಾದ ಸಮಸ್ಯೆಗಳನ್ನು ವಿವರಿಸಿ, ಪ್ರತಿಭಟನೆ ಹಿಂಪಡೆಯದಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next