ತಾಳಿಕೋಟೆ: 2021-22ನೇ ಸಾಲಿನ ಬೆಳೆಹಾನಿ ಪರಿಹಾರ ತಾಳಿಕೋಟೆ ತಾಲೂಕಿನಲ್ಲಿ ಬಂದಿಲ್ಲವೆಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷರನ್ನೊಳಗೊಂಡ ಕೆಲವು ರೈತರು ತಹಶೀಲ್ದಾರ್ ಮೂಲಕ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ತಾಳಿಕೋಟೆ ತಾಲೂಕಿನಲ್ಲಿ ಕಳೆದ ವರ್ಷ ಈ ವರ್ಷದ ಬೆಳೆಹಾನಿ ಪರಿಹಾರ ಬಂದಿಲ್ಲ. ಈ ಹಿಂದೆ ತಾಳಿಕೋಟೆ ತಹಶೀಲ್ದಾರ್‌ಗೆ ಈ ಕುರಿತು ಪತ್ರ ಬರೆದಾಗ ಅವರಿಂದ 7-4-2022ರಂದು ಉತ್ತರಿಸಿದ್ದ ಅವರು ಹಾನಿ ಪರಿಹಾರ ಕೊಡಿಸುವ ಕುರಿತು ನಿಯಮಾನುಸಾರ ಪರಿಹಾರ ತಂತ್ರಾಂಶದಲ್ಲಿ ಕ್ರಮವಹಿಸಲಾಗಿದೆ ಎಂದಿದ್ದರು. ಈಗಾಗಲೇ ಸುರಿದ, ಸುರಿಯುತ್ತಿರುವ ಮಳೆಯಿಂದ ತಾಳಿಕೋಟೆ ಭಾಗದ ಎಲ್ಲ ರೈತರ ಜಮೀನುಗಳಲ್ಲಿ ಬಿತ್ತಿದ ಬೆಳೆಗಳು ನಾಶವಾಗಿವೆ. ಈ ಕುರಿತು ರೈತರಿಗೆ ಯಾವುದೇ ಪರಿಹಾರ ದೊರಕಿಲ್ಲ. ಸದರಿ ಜಮೀನುಗಳಲ್ಲಿ ಬಿತ್ತಿದ ಹತ್ತಿ, ತೊಗರಿ ನಾಶವಾಗಿವೆ ಡೋಣಿ ತೀರದ ಎಡ ಬಲದಲ್ಲಿ ಇದ್ದ ಜಮೀನುಗಳಲ್ಲಿ ಡೋಣಿ ಪ್ರವಾಹದ ಹಾಗೂ ಸೋಗಲಿ ಹಳ್ಳದ ಪ್ರವಾಹದ ನೀರು ಜಮೀನುಗಳಲ್ಲಿ ಹಾಯ್ದಿದ್ದರಿಂದ ಬೆಳೆ ಅಷ್ಟೇ ಅಲ್ಲಾ ಜಮೀನು ಕೂಡಾ ಬಿತ್ತನಕ್ಕೆ ಬರಲಾರದಂತಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಈ ಕುರಿತು ಜಿಲ್ಲಾ ಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಂಡು ಶೀಘ್ರ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೂಕಿಹಾಳ ಹತ್ತಿರದ ಸೋಗಲಿ ಹಳ್ಳಕ್ಕೆ ಇತ್ತೀಚೆಗೆ ನಿರ್ಮಿಸಲಾದ ಸೇತುವೆ ನೀರಿನ ಪ್ರವಾಹಕ್ಕೆ ಕಿತ್ತುಕೊಂಡು ಹೋಗಿದೆ. ಇದರಿಂದ ವಾಹನ ಸಂಚಾರ ಜನ ಸಂಚಾರಕ್ಕೆ ತೊಂದರೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಡೋಣಿ ಹತ್ತಿರದ ಭಾಗಮ್ಮದೇವಿ ಮಂದಿರದ ಮಗ್ಗಲಿರುವ ಬಾವೂರ ರಸ್ತೆ ದುರಸ್ತಿ ಕಂಡಿಲ್ಲ. ಈ ರಸ್ತೆ ದುರಸ್ತಿಯಾದಲ್ಲಿ ತಾಳಿಕೋಟೆಯಿಂದ ಬಾವೂರ, ಮುದ್ದೇಬಿಹಾಳ, ವಿಜಯಪುರಕ್ಕೆ ತೆರಳುವ ಬಸ್‌ಗಳಿಗೆ ಡೋಣಿ ಹಾಗೂ ಸೋಗಲಿಯ ಮಹಾಪುರ ಬಂದಾಗ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಭಾರತೀಯ ಕಿಸಾನ್ ಸಂಘದ ತಾಳಿಕೋಟೆ ಅಧ್ಯಕ್ಷ ಹಣಮಗೌಡ ಬಸರಡ್ಡಿ, ರಾಮಪ್ಪ ಗೊಟಗುಣಕಿ, ಸಂಗನಗೌಡ ಹೆಗರಡ್ಡಿ, ಗುರನಗೌಡ ಪಾಟೀಲ, ಬಸಯ್ಯ ಹಿರೇಮಠ, ನಿಜಲಿಂಗಪ್ಪ ಅಂಬಿಗೇರ, ಜಲಾಲ್ ಪಟೇಲ, ಉಸ್ಮಾನಪಟೇಲ ಬಿರಾದಾರ, ಗುರನಗೌಡ ಚೌದ್ರಿ, ಎಚ್. ಎನ್.ಗೋಡಿಹಾಳ, ಎಸ್.ಜಿ.ಬೂದಿ, ಎಂ.ಸಿ.ಪಾಟೀಲ, ಪಿ.ಎಂ.ದರ್ಗಾ, ಎಚ್. ಎಸ್.ಬಿರಾದಾರ ಅವರನ್ನೋಳಗೊಂಡು 30 ಜನ ರೈತರು ಪತ್ರಕ್ಕೆ ಸಹಿ ಹಾಕಿದ್ದಾರೆ.