Advertisement

ರೈತರ ಆದಾಯ ದ್ವಿಗುಣದ ಯೋಜನೆ

03:19 PM Aug 29, 2017 | Team Udayavani |

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಯೋಚಿಸಿ, ಯೋಜಿಸಿ ರೈತರ ಆದಾಯ ದ್ವಿಗುಣಗೊಳಿಸಲು ಹಲವು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದ್ದಾರೆ.

Advertisement

ಸೋಮವಾರ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನ್ಯೂ ಇಂಡಿಯಾ ಮಂಥನ ಜಾಗೃತಿಯ ನವಭಾರತ ಮಂಥನ: ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದ ಅವರು, ಪ್ರಧಾನಿಯವರು 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ
ಇಟ್ಟುಕೊಂಡು ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ರೈತರು ಅವುಗಳನ್ನು ಬಳಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಲು ಮುಂದಾಗಬೇಕು ಎಂದರು. ಕಾರ್ಖಾನೆ, ಅಧಿಕಾರಿಗಳಿಲ್ಲದೆ ಜೀವನ ನಡೆಯಬಹುದು. ಆದರೆ, ಕೃಷಿ ಇಲ್ಲದೆ ಬದುಕು ನಡೆಯಲಾರದು. ಕೃಷಿ ಕ್ಷೇತ್ರದ ಬೆಳವಣಿಗೆಗೆ ಸತತ ಪ್ರಯತ್ನ ನಡೆದಿದೆ. ರೈತ ದೇಶದ ಬೆನ್ನೆಲುಬು ಎಂಬುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ, ಆತನ ಉದ್ಧಾರಕ್ಕೆ ಸರಿಯಾದ ಕಾರ್ಯಕ್ರಮ ರೂಪುಗೊಂಡಿರಲಿಲ್ಲ.

ಇದೀಗ ಕೇಂದ್ರ ಸರ್ಕಾರ ಎಲ್ಲಾ ನಿಟ್ಟಿನಲ್ಲಿ ಆಲೋಚಿಸಿ, ವಿವಿಧ ಕಾರ್ಯಕ್ರಮ ರೂಪಿಸಿದೆ. 70 ವರ್ಷಗಳಲ್ಲಿ ಆಗದೇ ಇರುವುದು ಏಕಾಏಕಿ ಆಗದು ಎಂಬ ಅರಿವಿದೆ. ಇದೇ ಕಾರಣಕ್ಕೆ ಮುಂದಿನ 5 ವರ್ಷದ ಅವಧಿಯನ್ನು ಆದಾಯ ದ್ವಿಗುಣಗೊಳಿಸಲು ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಮಳೆ ಪ್ರಮಾಣ ಕಡಮೆಯಾಗುತ್ತಿದೆ. ಮೊದಲೆಲ್ಲಾ ಅರಣ್ಯಕ್ಕೆಂದೇ ಇಂತಿಷ್ಟು ಜಾಗ ಮೀಸಲಿರುತ್ತಿದ್ದು. ಇದೀಗ ಅರಣ್ಯ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ಅರಣೀಕರಣಕ್ಕೂ ಸಹ ಒತ್ತುಕೊಡಬೇಕಿದೆ ಎಂದ ಅವರು, ಬದುಗಳಲ್ಲಿ ಮರ ನೆಟ್ಟು ಬೆಳೆಸಬೇಕಿದೆ.

ಕೃಷಿ ಸಿಂಚನ ಯೋಜನೆಯಡಿ ಚೆಕ್‌ಡ್ಯಾಂ, ಒಡ್ಡು ನಿರ್ಮಾಣ ಸೇರಿದಂತೆ ಅಂತರ್ಜಲ ಪ್ರಮಾಣ ಹೆಚ್ಚಿಸಲು ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಫಸಲ್‌ ಬಿಮಾ ಯೋಜನೆಯಡಿ ರೈತರ ಬೆಳೆನಷ್ಟಕ್ಕೆ ಪರಿಹಾರ ಕೊಡಲಾಗುತ್ತದೆ. ಈ ಬಾರಿ ನಮ್ಮ ಜಿಲ್ಲೆಯಲ್ಲಿ ಕೆಲ ಸಮಸ್ಯೆ ಆಗಿವೆ. ತೋಟಗಾರಿಕೆ ಬೆಳೆಗೆ ವಿಮೆ ಮಾಡಿಸಿದ್ದ ರೈತರಿಗೆ ಇಲಾಖೆ ಅಧಿಕಾರಿಗಳು ಸರಿಯಾಗಿ ಹಣ ಪಾವತಿಸಿಲ್ಲ. ಒಟ್ಟು 14 ಕೋಟಿ ರೂ. ಪರಿಹಾರ ಬಂದಿದೆ. ಆದರೆ, ಕೇವಲ 8 ಕೋಟಿ ರೂ. ಮಾತ್ರ ನೀಡಿದ್ದಾರೆ. ಇನ್ನೂ 6 ಕೋಟಿ ರೂ. ಖಾತೆಯಲ್ಲಿಯೇ ಇದೆ. ಇದು ಯಾಕೆ ಎಂದು ಪ್ರಶ್ನಿಸಿದರೆ ರಾಜ್ಯ ಸರ್ಕಾರ, ವಿಮೆ ಕಂಪನಿ ಕಡೆ ಕೈ ತೋರಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ ಮಾತನಾಡಿ, ಬೆಳೆ ಪದ್ಧತಿ ಬದಲಾವಣೆ ಸೇರಿ ಇತರೆ ಪ್ರಯೋಗಕ್ಕೆ ರೈತರು ಮುಂದಾಗಬಹುದು. ಆದರೆ, ಮಳೆಯೇ ಆಗದೇ ಇದ್ದರೆ, ಅತಿ ಕಡಮೆ ಪ್ರಮಾಣದಲ್ಲಿ ಮಳೆಯಾದರೆ ಯಾವ ರೀತಿಯ ಬೆಳೆ ಬೆಳೆಯಬೇಕು ಎಂಬುದರ ಕುರಿತು ವಿಜ್ಞಾನಿಗಳು, ಸರ್ಕಾರ ರೈತರಿಗೆ ತಿಳಿಸಬೇಕಿದೆ. ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಈಗ ಇದೇ ಸ್ಥಿತಿ ಇದೆ. ಈ ವರ್ಷ ಒಂದೂ ಸಹ ದೊಡ್ಡ ಮಳೆಯಾಗಿಲ್ಲ ಎಂದರು.

Advertisement

ನಮ್ಮ ರೈತರು ಸಹ ಇಂದು ಏಕ ಬೆಳೆ ಪದ್ಧತಿಗೆ ಒಗ್ಗಿಕೊಂಡಿದ್ದಾರೆ. ನೀರಾವರಿ ಇದ್ದರೆ ಭತ್ತ, ಮಳೆಯಾಶ್ರಿತ ಭೂಮಿ ಇದ್ದರೆ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಹೀಗಾಗಿಯೇ ಬೆಳೆದರೂ ನಷ್ಟ, ಬೆಳೆಯದಿದ್ದರೂ ನಷ್ಟ ಎಂಬಂತಹ ಸ್ಥಿತಿಗೆ ಬಂದಿದ್ದಾರೆ. ಮುಂದೆ ಹೀಗಾಗದಂತೆ
ನೋಡಿಕೊಳ್ಳಬೇಕು. ಸರಿಯಾದ ಮಾಹಿತಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಅವರು ಸಲಹೆ ನೀಡಿದರು. ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯ್ಕ ಮಾತನಾಡಿ, ಸಮಗ್ರ ಕೃಷಿ ನೀತಿ ಜಾರಿಗೆ ಸರ್ಕಾರ ಪಕ್ಷಾತೀತವಾಗಿ ಪ್ರಯತ್ನಿಸಬೇಕಿದೆ. ನೀರು, ಭೂಮಿ
ಬಳಕೆ ಕುರಿತು ಸ್ಪಷ್ಟ ನೀತಿ ಬೇಕಿದೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಇಡೀ ಕೃಷಿಕರನ್ನು ಒಂದೇ ಕುಲ ಎಂಬುದಾಗಿ ಭಾವಿಸಿ, ಇಂತಹ ನೀತಿ ಜಾರಿಗೆ ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯತ್‌ ಸದಸ್ಯರಾದ ತೇಜಸ್ವಿ ಪಟೇಲ್‌, ಸುವರ್ಣ ಆರುಂಡಿ ನಾಗರಾಜ್‌, ಸಾಕಮ್ಮ, ಶೈಲಜಾ, ಮಾಜಿ ಸದಸ್ಯೆ ಲತಾ ತೇಜಸ್ವಿ ಪಟೇಲ್‌, ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಕೃಷಿ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ, ತರಳಬಾರಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ಯೋಜನಾಧಿಕಾರಿ  ದೇವರಾಜ್‌ ಇತರರು ವೇದಿಕೆಯಲ್ಲಿದ್ದರು. ಬೆಂಗಳೂರು ಕೃಷಿ ತಂತ್ರಜ್ಞಾನ ಅನ್ವಯ ಸಂಸ್ಥೆಯ ಡಾ| ಚಂದ್ರೇಗೌಡ ಉಪನ್ಯಾಸ ನೀಡಿದರು. ಕೃಷಿ ಕ್ಷೇತ್ರದ ವೃದ್ಧಿಗೆ ಎಲ್ಲರೂ ಶ್ರಮಿಸುವುದಾಗಿ ಇದೇ ಸಂದರ್ಭದಲ್ಲಿ ಸಂಕಲ್ಪ ತೊಡಲಾಯಿತು.

ಬೆಳೆ ಪದ್ಧತಿ ಜಾರಿ ಆಗಲಿ
ಕೇಂದ್ರ ಸರ್ಕಾರ ಇಷ್ಟೆಲ್ಲಾ ಕಾರ್ಯಕ್ರಮ ರೂಪಿಸುವ ಜೊತೆಗೆ ಬೆಳೆ ಪದ್ಧತಿ ಜಾರಿ ಮಾಡಬೇಕಿದೆ. ನಮಗೆ ಈ ಬೆಳೆ ಇಂತಿಷ್ಟು ಬೇಕು. ಇಷ್ಟೇ ಬೆಳೆದುಕೊಡಿ, ಇದಕ್ಕೆ ಈ ದರ ನೀಡುತ್ತೇವೆ ಎಂಬುದನ್ನು ಕೇಂದ್ರ ಸರ್ಕಾರ ಮೊದಲೇ ಸೂಚಿಸುವಂತಹ ಪದ್ಧತಿ ಜಾರಿಯಾಬೇಕು. ಆಗ ರೈತರು ನೆಮ್ಮದಿಯಿಂದ  ಜೀವನ ನಡೆಸಲು ಸಹಕಾರಿಯಾಗುತ್ತದೆ.
ತೇಜಸ್ವಿ ಪಟೇಲ್‌, ಜಿಪಂ ಸದಸ್ಯ.

ಬದಲಾದ ಕೃಷಿಕ
ಇಂದು ಕೃಷಿಕ ಬದಲಾಗಿದ್ದಾನೆ. ಬೆಳ್ಳಂಬೆಳಗ್ಗೆ ಎದ್ದು ಹೊಲಕ್ಕೆ ಹೋಗುತ್ತಿದ್ದವನು ಇಂದು 8 ಗಂಟೆಯವರೆಗೆ ಮಲಗುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಯಾರು ಏನೇ ಹೇಳಿದರೂ. ಯಾವುದೇ ತಂತ್ರಜ್ಞಾನ ಬಂದರೂ ಕೃಷಿಕ ತನ್ನ ವೃತ್ತಿ ಗೌರವ ಇಟ್ಟುಕೊಂಡು ಖುದ್ದು ಶ್ರಮ ಪಡದಿದ್ದರೆ ಕೃಷಿ ಕ್ಷೇತ್ರ ಸುಧಾರಣೆ ಆಗಲಾರದು.  
ಕುಂದೂರು ಹನುಮಂತಪ್ಪ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next