Advertisement
ಕಳೆದ ವರ್ಷ ಸಮರ್ಪಕವಾಗಿ ಮಳೆಯಾದರೂ ಬಿತ್ತಿದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಅನುಭವಿಸಿದ ನೋವಿನಿಂದ ರೈತರು ಇನ್ನೂ ಹೊರಬಂದಿಲ್ಲ. ಮುಂಗಾರು ಮಳೆ ಇನ್ನೂ ಆರಂಭವಾಗದಿದ್ದರೂ ಮುಂಗಾರು ಪೂರ್ವ ಮಳೆ ರೈತರಿಗೆ ಒಂದಿಷ್ಟು ಹರ್ಷ ತಂದಿದೆ. ಇತ್ತೀಚೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ರೈತರು ಚಕ್ಕಡಿ, ಜೋಡೆತ್ತಿನೊಂದಿಗೆ ರಂಟೆ, ಕುಂಟಿ, ನೇಗಿಲು ಸಹಿತ ಹೊಲ ಹರಗಿ ಹದಗೊಳಿಸಿ ಬಿತ್ತನೆ ಮಾಡುತ್ತಿದ್ದಾರೆ.
Related Articles
Advertisement
ಗಜೇಂದ್ರಗಡ, ಗೋಗೇರಿ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಚಿಲ್‌ಝರಿ, ಕಾಲಕಾಲೇಶ್ವರ, ಕೊಡಗಾನೂರ, ವೀರಾಪುರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಮುಶಿಗೇರಿ, ಕಲ್ಲಿಗನೂರ ಗ್ರಾಮಗಳಲ್ಲಿ ರೈತರು ತಮ್ಮ ಹೊಲದಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.
ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರೀಡ್ ಜೋಳ, ಗುರೆಳ್ಳು, ಯಳ್ಳು, ತೊಗರಿ ಇತ್ಯಾದಿ ಬೆಳೆಗಳ ಬಿತ್ತನೆಯಲ್ಲಿ ತಲ್ಲೀನರಾಗಿದ್ದಾರೆ. ಜೂನ್ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ. ಜೊತೆಗೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ರೈತ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಆದರೆ, ಮುಂಗಾರು ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ವಾಡಿಕೆಗಿಂತ 136 ಮಿಮೀ ಮಳೆ ಸುರಿದಿರುವುದು ಕೃಷಿ ಚುಟುವಟಿಕೆ ಚುರುಕುಗೊಳ್ಳಲು ಸಹಕಾರಿಯಾಗಿದೆ.
ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ಕೃಪೆ ತೋರಿದ್ದಾನೆ. ಇದರಿಂದ ಹೊಲ ಹಸಿಯಾಗಿವೆ. ಹೀಗಾಗಿ, ಹೊಲ ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಮಳೆರಾಯ ಕೈಹಿಡಿದರೆ ಮಾತ್ರ ರೈತರು ಬದುಕೋಕೆ ಸಾಧ್ಯ. -ಕಳಕಪ್ಪ ಮೇಟಿ, ರೈತ
ಪ್ರಸಕ್ತ ಮುಂಗಾರು ಪ್ರವೇಶಕ್ಕೂ ಮುನ್ನ ತಾಲೂಕಿನಲ್ಲಿ ವಾಡಿಕೆ ಮಳೆ 64 ಮಿಮೀ ಇದೆ. ಆದರೆ, ಇತ್ತೀಚೆಗೆ 136 ಮಿಮೀ ಮಳೆ ಸುರಿದಿದ್ದು, ಮುಂಗಾರು ಬಿತ್ತನೆಗೆ ರೈತರು ಉತ್ಸುಕರಾಗಿದ್ದಾರೆ. ಹೀಗಾಗಿ, ಬೀಜ ವಿತರಣೆ ಮಾಡಲಾಗುತ್ತಿದೆ. ಯಾವುದೇ ಕೊರತೆಯಾಗದಂತೆ ಬೀಜ ವಿತರಿಸಲಾಗಿದೆ. -ರವೀಂದ್ರ ಪಾಟೀಲ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು