Advertisement

ಕೃಷಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

02:25 PM Jun 13, 2020 | Suhan S |

ಶಿಗ್ಗಾವಿ: ಬೀಜ ಕಂಪನಿಗಳು ಪೂರೈಸಿದ ಸೋಯಾಬಿನ್‌ ಬಿತ್ತನೆ ಮಾಡಿದ ನೂರಾರು ರೈತರು ಮುಂಗಾರು ಹಂಗಾಮಿನಲ್ಲಿ ಮತ್ತೂಮ್ಮೆ ಕೈಸುಟ್ಟುಕೊಂಡಿದ್ದಾರೆ. ಬಿತ್ತನೆ ಬೀಜ, ಕೃಷಿ ಸಾಗುವಳಿ ಖರ್ಚು, ಅಲ್ಲದೇ ರಸಗೊಬ್ಬರ ಬಳಕೆ ಒಳಗೊಂಡಂತೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದರು.

Advertisement

ಜಿ.ಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ ನೇತೃತ್ವದಲ್ಲಿ ಹತ್ತಾರು ಗ್ರಾಮಗಳ ರೈತರು ಜಮಾವಣೆಗೊಂಡು ಕೃಷಿ ಇಲಾಖೆ ಅಧಿಕಾರಿಗಳನ್ನು ಕಾರ್ಯಾಲಯದಿಂದ ಹೊರಹಾಕಿ ಬೀಗ ಜಡಿದರು. ಜಮೀನು ಪರಿಶೀಲನೆಗೆ ತೆರಳಿದ್ದ ಕೃಷಿ ಸಹಾಯಕ ನಿರ್ದೇಶಕ ಸುರೇಶ ದೀಕ್ಷಿತ ಆಗಮಿಸಿ ರೈತರ ಜೊತೆಗೆ ಮಾತುಕತೆ ಸಂಧಾನ ನಡೆಸಿದರು. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಬೇರೆ ಬೀಜ ಪೂರೈಸಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಅಧಿಕಾರಿಗಳ ಮಾತಿಗೆ ಸಂತುಷ್ಟರಾಗದ ರೈತರು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಲು ಪಟ್ಟುಹಿಡಿದು, ಮಳೆಗಾಲ ಆರಂಭವಾದ ಮೇಲೆ ಬೀಜ ಬಿತ್ತುವ ಹಂಗಾಮು ಮುಗಿಯುತ್ತದೆ. ಬೀಜ ಪೂರೈಸಿದರೂ ಬಿತ್ತನೆ ಮಾಡಲು ಆಗುವುದಿಲ್ಲ. ಈಗಾಗಲೇ ಲಾಕ್‌ಡೌನ ಪರಿಸ್ಥಿತಿಯಿಂದ ಕೃಷಿ ಕ್ಷೇತ್ರ ನಲುಗಿದೆ. ಮತ್ತೆ ಎರಡೆರಡು ಭಾರಿ ಬಿತ್ತನೆ ಮಾಡಿದರೂ ಮೊಳಕೆ ಪ್ರಮಾಣವೇ ಇಲ್ಲದಾಗಿದ್ದು ಸಾಗುವಳಿ, ಬೀಜ ಹಾಗೂ ರಸಗೊಬ್ಬರ ಖರ್ಚುವೆಚ್ಚಗಳನ್ನು ಬೀಜ ಕಂಪನಿಗಳಿಂದ ಭರಿಸುವಂತಾಗಬೇಕು. ಸೂಕ್ತ ಪರಿಹಾರ ಕೊಡಿಸಬೇಕು ಎಂದರು. ಕೃಷಿ ಅಧಿಕಾರಿಗಳು ರೈತರನ್ನು ಸಮಾಧಾನಪಡಿಸಿ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ಒದಗಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಕುರಗೋಡಿ, ಶಂಕ್ರಪ್ಪ ಗುಳೇದಕೇರಿ, ದುಂಡಪ್ಪ ರಾಯಣ್ಣವರ, ದ್ಯಾಮಣ್ಣ ಮಲ್ಲಾಡದ, ಫಕ್ಕೀರಪ್ಪ ಹರಿಜನ, ನಾಗರಾಜ ಪಾಟೀಲ, ಹನುಮಂತಪ್ಪ ಕೊಕಾಟಿ, ಸುರೇಶ ಶೆಟ್ಟೆಣ್ಣವರ, ರಮೇಶ ಪರ್ಜಿ, ಫಕ್ಕೀರಪ್ಪ ಗಾಜಿಪುರ, ಅಲ್ಲದೇ ಹಲವಾರು ಗ್ರಾಮದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next