ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು 20 ದಿನಗಳೊಳಗೆ ಮಹದಾಯಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ನೀಡಿದ್ದ ವಾಗ್ಧಾನ ಈಡೇರಿಲ್ಲವೆಂದು ರೈತ ಸೇನಾ ಕರ್ನಾಟಕ
ಕಾರ್ಯಕರ್ತರು ನಗರದ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗ ದಲ್ಲಿ ಶನಿವಾರ ಆರಂಭಿಸಿದ ಅನಿರ್ದಿಷ್ಟ ಪ್ರತಿಭಟನೆ ಭಾನುವಾರ 2 ನೇ ದಿನಕ್ಕೆ ಕಾಲಿಟ್ಟಿದೆ.
ರಾತ್ರಿ ಬಿಜೆಪಿ ಕಚೇರಿ ಮುಂಭಾಗದಲ್ಲೇ ರೈತರು ಮಲಗುವ ಮೂಲಕ ಹೋರಾಟ ಮುಂದುವರಿಸಿದರು. ಚಳಿಯಲ್ಲೇ ಹಸಿರು ಶಾಲುಗಳನ್ನುಹೊದ್ದುಕೊಂಡು ಹಲವರು ಮಲಗಿದ್ದ ದೃಶ್ಯ ಕಂಡು ಬಂದಿತು.
ಸ್ಥಳೀಯರು ಹೊದಿಕೆಗಳನ್ನು ತಂದು ಕೆಲ ಮಹಿಳೆಯರಿಗೆ ನೀಡಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದರು.
ಗಾರ್ಮೆಂಟ್ಸ್ ಉದ್ಯಮಿಯೊಬ್ಬರು ಭಾನುವಾರ ಬೆಳಗ್ಗೆ ಉಪಹಾರ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಆಟೋ ಡ್ರೈವರ್‌ಗಳು ಬನ್ ನೀಡಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.
ಯಡಿಯೂರಪ್ಪ ಅವರು ಕೊಟ್ಟ ಭರವಸೆಯಂತೆ ಮಹದಾಯಿ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವವರೆಗೂ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.