Advertisement

ಲಖೀಂಪುರ ಹಿಂಸಾಚಾರ: ಮೃತಪಟ್ಟ 4 ರೈತರ ಕುಟುಂಬಕ್ಕೆ 45 ಲಕ್ಷ ರೂ

02:32 PM Oct 04, 2021 | Team Udayavani |

ಲಖೀಂಪುರ : ಇಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಕ್ಕೆ  ಸರಕಾರದ ವತಿಯಿಂದ 45ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಲಾಗುವುದು ಎಂದು ಉತ್ತರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕುಮಾರ್, ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ರೈತರ ದೂರಿನ ಆಧಾರದ ಮೇಲೆ ಎಫ್ಆರ್ ಐ ದಾಖಲಿಸಲಾಗುವುದು ಎಂದು ತಿಳಿಸಿದರು.

ಹಿಂಸಾಚಾರದ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖೇದ ವ್ಯಕ್ತ ಪಡಿಸಿದ್ದು, ಈ ಘಟನೆಗೆ ಕಾರಣೀಕರ್ತ ರಾದ ಯಾವುದೇ ವ್ಯಕ್ತಿಯಿರಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ಕತ್ತಿ, ದೊಣ್ಣೆಗಳಿಂದ ದಾಳಿ

ಘಟನೆಯ ಕುರಿತು ಮಾತನಾಡಿದ ರಾಜ್ಯ ಖಾತೆಯ ಸಚಿವ ಅಜಯ್ ಮಿಶ್ರಾ ತೇಣಿ , ಬಿಜೆಪಿ ಕಾರ್ಯಕರ್ತರ ಮೇಲೆ ದೊಣ್ಣೆ ಮತ್ತು ಮಾರಕಾಯುಧಗಳಿಂದ ದಾಳಿ ನಡೆಸಲಾಗಿದೆ . ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಕೆಲವರು ನಾನು ರೈತರನ್ನು ಕತ್ತರಿಸಿ ಹಾಕುವಂತೆ ಹೇಳಿರುವುದಾಗಿ ಅಪ ಪ್ರಚಾರ ಮಾಡುತ್ತಿದ್ದಾರೆ. ನನ್ನ ಮಗನ ಮೇಲೂ ಆರೋಪ ಮಾಡಲಾಗಿದ್ದು, ಅವನು ಸ್ಥಳದಲ್ಲಿದ್ದರೆ ಅವನ ಹತ್ಯೆಯಾಗುತ್ತಿತ್ತು ಎಂದಿದ್ದಾರೆ.

Advertisement

ಹಿಂಸಾಚಾರದಲ್ಲಿ ಬಲಿಯಾದ ನಾಲ್ವರು ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಘಟನೆಯನ್ನು ಸಿಬಿಐ ಇಲ್ಲವೇ ಯಸ್ ಐ ಟಿ ಮೂಲಕ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ತೀವ್ರ ಸ್ವರೂಪಕ್ಕೆ

ಲಖೀಂಪುರ ಖೇರಿ ಘಟನೆ ಖಂಡಿಸಿ ದೇಶಾದ್ಯಂತ ರೈತ ಸಂಘಟನೆಗಳು ಸೇರಿದಂತೆ ಪ್ರಮುಖ ವಿಪಕ್ಷಗಳು ಸೋಮವಾರ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ , ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ರಾಮ್ ಗೋಪಾಲ್ ಯಾದವ್ , ಪ್ರಗತಿಶೀಲ್ ಸಮಾಜವಾದಿ ಪಕ್ಷದ ಸ್ಥಾಪಕ ಶಿವಪಾಲ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಲಕ್ನೋ ದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಅವರು ಲಖೀಂಪುರಕ್ಕೆ ಆಗಮಿಸಿ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

ಪ್ರತಿಭಟನೆ ವೇಳೆ ಸೆಕ್ಷನ್ 144 ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಅಖಿಲೇಶ್ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಇತರ ಪ್ರಮುಖ ವಿಪಕ್ಷಗಳ ನಾಯಕರನ್ನೂ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಖೀಂಪುರ ಖೇರಿಯಲ್ಲಿ ರವಿವಾರ ಪ್ರತಿಭಟನ ‌ಕಾರ ರೈತರು ‌ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 8 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯ ಗೊಂಡಿದ್ದರು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ದೇಶಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ರೈತರಿಗೆ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದೆ. ಸುಪ್ರೀಂ
ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆ ಬಗ್ಗೆ ತನಿಖೆಗೂ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next