ಬೆಂಗಳೂರು:ಸಾಲಮನ್ನಾ, ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 11ಗಂಟೆಗೆ ಜಾಥಾ ಹೊರಟು ಆನಂದ್ ರಾವ್ ಸರ್ಕಲ್ ಮೂಲಕ ಹೊರಟು ವಿಧಾನಸೌಧ ಮುತ್ತಿಗೆ ಹಾಕುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಏತನ್ಮಧ್ಯೆ ಫ್ರೀಡಂ ಪಾರ್ಕ್ ಬಳಿ ರೈತರನ್ನು ತಡೆಯಲು ಪೊಲೀಸರು ಸಜ್ಜುಗೊಂಡಿದ್ದಾರೆ. ಬಿಗಿ ಭದ್ರತೆಯ ದೃಷ್ಟಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಿಎಂ ಕ್ಷಮೆ ಕೇಳಲು ರೈತರ ಪಟ್ಟು:ರೈತ ಹೋರಾಟಗಾರರನ್ನು ಗೂಂಡಾಗಳು ಎಂದು ಹೇಳಿರುವ ಹಾಗೂ ನಾಲ್ಕು ವರ್ಷ ಕಾಲ ಎಲ್ಲಿ ಮಲಗಿದ್ದೀಯಮ್ಮಾ ಎಂದು ಕೇಳಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಖಾನಾಪುರದಲ್ಲಿ ರೈತರು ಆಗ್ರಹಿಸಿದ್ದಾರೆ.