ಸಿಂಧನೂರು: ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ಬಿಜೆಪಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದ ಘಟನೆ ಆ.17ರ ಮಂಗಳವಾರ ನಡೆಯಿತು.
ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಇರುವ ಜೆಸ್ಕಾಂ ಕಚೇರಿಗೆ ದಿಢೀರ್ ಆಗಮಿಸಿದ ರೈತರು ಪ್ರತಿಭಟನೆಗೆ ಮುಂದಾದರು.
ಕೃಷಿ ಪಂಪ್ ಸೆಟ್ ಗಳಿಗೆ ಏಳು ತಾಸು ವಿದ್ಯುತ್ ಕೊಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಐದು ತಾಸು ಕೂಡ ವಿದ್ಯುತ್ ಕೊಡುತ್ತಿಲ್ಲ. ಹಾಕಿದ ಜೋಳ, ಭತ್ತದ ಬೆಳೆ ನೀರಿಲ್ಲದೇ ಒಣಗುತ್ತಿವೆ. ರಾತ್ರಿ 12 ಗಂಟೆ ನಂತರ ತ್ರೀಫೇಸ್ ವಿದ್ಯುತ್ ಕೊಟ್ಟು ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಕೆ.ಕರಿಯಪ್ಪ ಕಚೇರಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳು ಬಾಗಿಲು ಹಾಕಿಕೊಂಡು ಕುಳಿತಿದ್ದರು. ಬಾಗಿಲು ತೆಗೆಯಲು ತಡವಾಗಿದ್ದರಿಂದ ಆಕ್ರೋಶಗೊಂಡ ರೈತರು, ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜಿ.ಪಂ.ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಕರೆಂಟ್ ಸಮಸ್ಯೆ ಕುರಿತು ಶಾಸಕ ಹಂಪನಗೌಡ ಬಾದರ್ಲಿ ಅವರು ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದ್ದಾರೆ. ರೈತರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು. ಜೊತೆಗೆ ಶಾಸಕರೊಂದಿಗೆ ಅಧಿಕಾರಿಗಳನ್ನು ಮಾತಾನಾಡಿಸಿದರು.
ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.