Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

07:26 AM Mar 15, 2019 | |

ಹುಣಸೂರು: ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ ಹತ್ತು ಗಂಟೆಗಳ ಸಮರ್ಪಕ ವಿದ್ಯುತ್‌ ಪೂರೈಕೆ, ನಿಗದಿತ ಸಮಯ ಟಿ.ಸಿ. ಬದಲಾವಣೆ, ಬಾಕಿ ವಸೂಲಿಕೆ ಪೊಲೀಸರನ್ನು ಕಳುಹಿಸಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಗರದ ಸೆಸ್ಕ್ ಎಇಇ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

Advertisement

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್‌ ಮಾತನಾಡಿ, ಸರಕಾರ ಪಂಪ್‌ಸೆಟ್‌ಗಳಿಗೆ ನಿಗದಿಗೊಳಿಸಿದ ವೇಳೆಯಲ್ಲೂ ವಿದ್ಯುತ್‌ ಸರಬರಾಜು ಮಾಡುತ್ತಿಲ್ಲ, ಕೆಟ್ಟು ಹೋಗುವ ಟಿ.ಸಿ.ಗಳನ್ನು ಸಕಾಲದಲ್ಲಿ ಬದಲಾಯಿಸದೆ ಬೆಳೆಗಳು ಒಣಗುತ್ತಿವೆ. ಹೀಗಾಗಿ ಸಬೂಬು ಹೇಳದೆ ರೈತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯ ಲೋಕೇಶ್‌ರಾಜೇಅರಸ್‌ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಪಂಪ್‌ಸೆಟ್‌ಗಳಿಗೆ 24 ಗಂಟೆ ವಿದ್ಯುತ್‌ ನೀಡುತ್ತೇವೆಂದು ಹೇಳಿ ವಂಚಿಸಿದೆ. ನಿತ್ಯ ಕನಿಷ್ಠ 10 ಗಂಟೆಯಾದರೂ ವಿದ್ಯುತ್‌ ನೀಡಿರೆಂದು ಒತ್ತಾಯಿಸಿ, ಇದು ಈಡೇರದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.

ಭರವಸೆ: ಮನವಿ ಸ್ವೀಕರಿಸಿದ ಇ.ಇ.ಸುನಿಲ್‌ಕುಮಾರ್‌ ಈಗಾಗಲೇ ಎಂ.ಡಿ. ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಹಗಲು ವೇಳೆ 7 ಗಂಟೆ ವಿದ್ಯುತ್‌ ಪೂರೈಸುವ ಹಾಗೂ ವ್ಯತಯವಾದಲ್ಲಿ ರಾತ್ರಿ ವೇಳೆಯೂ ಸಹ ಪೂರೈಸಲಾಗುವುದು. ಟಿ.ಸಿ ಸುಟ್ಟವೇಳೆ ಸಕಾಲದಲ್ಲಿ ಬದಲಾಯಿಸಲು ಕ್ರಮವಹಿಸಲಾಗುವುದು. ಉಳಿದ ಬೇಡಿಕೆಗಳ ಬಗ್ಗೆ ಹಿರಿಯ ಅಕಾರಿಗಳೊಂದಿಗೆ ಚರ್ಚಿಸಿ  ಬಗೆಹರಿಸುವ ಭರವಸೆ ಇತ್ತ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದರು.

ರೈತರ ಬೇಡಿಕೆಗಳು: ಗುತ್ತಿಗೆ ಏಜೆಸ್ಸಿಯವರ ವಿಳಂಬ ನೀತಿಯಿಂದಾಗಿ ಕಚೇರಿಗೆ ಅಲೆದಾಟ ತಪ್ಪಿಸಬೇಕು. ಇದಕ್ಕಾಗಿ ಅವರಿಗೆ ಕಾಮಗಾರಿ ನಡೆಸಲು ಸಕಾಲದಲ್ಲಿ ವಿದ್ಯುತ್‌ ಉಪಕರಣ ಒದಗಿಸಬೇಕು. ಬಡವರ ಭಾಗ್ಯಜ್ಯೋತಿ ಮತ್ತಿತರ ಯೋಜನೆಯ ವಿದ್ಯುತ್‌ ಬಿಲ್‌ ಬಾಕಿ ವಸೂಲಿಗೆ ಪೊಲೀಸರ ಮೂಲಕ ಬೆದರಿಕೆ ಹಾಕುವ ಪ್ರವೃತ್ತಿ ನಿಲ್ಲಬೇಕು. ಇವರ ವಿದ್ಯುತ್‌ ಬಾಕಿಯನ್ನು ಮನ್ನಾ ಮಾಡಬೇಕು.

Advertisement

ಪಂಪ್‌ಸೆಟ್‌ಗೆ ಹಗಲಿನಲ್ಲಿ 10 ಗಂಟೆ, ರಾತ್ರಿವೇಳೆ ಕನಿಷ್ಠ 7 ಗಂಟೆ ಗುಣಾತ್ಮಕ ವಿದ್ಯುತ್‌ ಪೂರೈಸಬೇಕು, ಸುಟ್ಟುಹೋದ ಟಿ.ಸಿ.ಗಳನ್ನು ನಿಗದಿಯಂತೆ 72 ಗಂಟೆಯೊಳಗೆ ಬದಲಾಯಿಸಬೇಕು. ಪ್ರತಿ ನಾಲ್ಕು ಪಂಪ್‌ಸೆಟ್‌ಗೊಂದರಂತೆ ಟ್ರಾನ್ಸ್‌ಫಾರ್ಮರ್‌ನ್ನು ಅಳವಡಿಸಬೇಕು. ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಬಡವರಿಗೆ ವಿದ್ಯುತ್‌ಸಂಪರ್ಕ ನೀಡುವ ಕಾರ್ಯ ವಿಳಂಬವಾಗುತ್ತಿದ್ದು, ತಕ್ಷಣದಿಂದಲೇ ಸಂಪರ್ಕನೀಡಬೇಕು.

ಹುಣಸೂರಿಗೆ 220 ಕೆ.ವಿ.ಎ. ವಿದ್ಯುತ್‌ ವಿತರಣಾಕೇಂದ್ರ ಸ್ಥಾಪಿಸಲು ಅನುಮೋದನೆ ದೊರೆತಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣವೇ ತಾಲೂಕು ಆಡಳಿತ ಕ್ರಮ ವಹಿಸಬೇಕು. ಹುಣಸೂರು ತಾಲ್ಲೂಕಿಗೆ ಸೆಸ್ಕ್ ಅಧೀಕ್ಷಕ ಅಭಿಯಂತರವರ ಕಚೇರಿ ಮಂಜೂರಾಗಿದ್ದು, ಶೀಘ್ರ ಕಚೇರಿ ಪ್ರಾರಂಭಿಸಬೇಕು. ಕಟ್ಟೆಮಳಲವಾಡಿ ಭಾಗದಲ್ಲಿ ವಿದ್ಯುತ್‌ಸಮಸ್ಯೆ ಹೆಚ್ಚಿದ್ದು, ಸಬ್‌ಸ್ಟೇಷನ್‌ ಆರಂಭಿಸಲು ಕ್ರಮ ವಹಿಸಬೇಕು.

ತಾಲೂಕು ಅಧ್ಯಕ್ಷ ಬೆಂಕಿಪುರಚಿಕ್ಕಣ್ಣ, ಕಾರ್ಯದರ್ಶಿ ಅಸ್ವಾಳುಶಂಕರೇಗೌಡ, ಸಂಘದ ಕೋಶಾಧ್ಯಕ್ಷ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಕಾರ್ಯನಿರ್ವಾಹಕ ಇಂಜಿನಿಯರ್‌ ಸುನಿಲ್‌ಕುಮಾರಿಗೆ ಸಲ್ಲಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಸಂಘದ ಪದಾಧಿಕಾರಿಗಳಾದ ಆಲಿಜಾನ್‌, ಮಹದೇವ್‌, ವಿ.ಟಿ.ಮಣಿ, ರಾಮಕೃಷ್ಣೇಗೌಡ, ಬಸವರಾಜೇಗೌಡ, ಕಟ್ಟೆಮಳಲವಾಡಿ ಮಹದೇವ, ಹರಳಹಳ್ಳಿ ಬಸವರಾಜು, ಧನಂಜಯ, ವಿಷಕಂಠಪ್ಪ, ಸೋಮಶೇಖರ್‌, ಜಯಣ್ಣ, ರಾಮೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next