Advertisement

ಪ್ರತಿಭಟನ ನಿರತ ರೈತರೊಂದಿಗೆ ಮಾತುಕತೆ; 2 ಬೇಡಿಕೆಗಳಿಗೆ ಕೇಂದ್ರ ಸಮ್ಮತಿ

01:22 AM Dec 31, 2020 | Team Udayavani |

ಹೊಸದಿಲ್ಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರಕಾರದ ನಡುವೆ ನಡೆದ 6ನೇ ಸುತ್ತಿನ ಮಾತುಕತೆಯೂ ಅಪೂರ್ಣವಾಗಿದೆ. ಆದರೆ ರೈತರು ಮಂಡಿಸಿದ್ದ 4 ಬೇಡಿಕೆಗಳಲ್ಲಿ ಎರಡನ್ನು ಈಡೇರಿಸುವ ಬಗ್ಗೆ ಸರಕಾರ ಭರವಸೆ ನೀಡಿದೆ.

Advertisement

ಜ. 4ರಂದು ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ. ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಮತ್ತು ಸಚಿವ ಸೋಮ್‌ಪ್ರಕಾಶ್‌ ಭಾಗಿಯಾಗಿದ್ದರೆ, ಸುಮಾರು 40 ಮಂದಿ ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಮುಖವಾಗಿ ವಿದ್ಯುತ್‌ ಮಸೂದೆ ಮತ್ತು ಕಳೆ ಸುಡುವಿಕೆಗೆ ದಂಡ ವಿಧಿಸುತ್ತಿರುವ ಬಗ್ಗೆ ಚರ್ಚೆ ನಡೆಯಿತು. ದಂಡ ಪರಿಷ್ಕರಣೆ ಮತ್ತು ವಿದ್ಯುತ್‌ ಮಸೂದೆಯನ್ನು ವಾಪಸ್‌ ಪಡೆಯುವ ಬಗ್ಗೆ ಸರಕಾರ ರೈತರಿಗೆ ಭರವಸೆ ನೀಡಿತು.

ಸಭೆ ಅನಂತರ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಸದ್ಯ ರೈತರ ನಾಲ್ಕು ಬೇಡಿಕೆಗಳಲ್ಲಿ ಎರಡನ್ನು ಈಡೇರಿಸುವ ಬಗ್ಗೆ ಭರವಸೆ ನೀಡಲಾಗಿದೆ. ಇದಕ್ಕೆ ರೈತರೂ ಒಪ್ಪಿದ್ದಾರೆ. ಮೂರು ಕೃಷಿ ಕಾಯ್ದೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಮಾತುಕತೆ ಮುಂದುವರಿದಿದೆ. ಜ. 4ರ ಅಪರಾಹ್ನ ಮತ್ತೂಮ್ಮೆ ಸಭೆ ಸೇರಲಿದ್ದೇವೆ. ಅಂದು ಈ ಬಗ್ಗೆ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದರು.

ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರಕಾರ ರೈತರಿಗೆ ಲಿಖೀತ ರೂಪದಲ್ಲಿ ನೀಡಲು ಸಿದ್ಧವಿದೆ. ಅಲ್ಲದೆ ಇದಕ್ಕೆ ಕಾನೂನಿನ ಮಾನ್ಯತೆ ನೀಡಬಹುದೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅನಂತರ ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಹೊಸ ವರ್ಷದಲ್ಲಿ ಈ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ತೋಮರ್‌ ಹೇಳಿದರು. ಆದರೆ ಕೃಷಿ ಕಾಯ್ದೆಗಳ ರದ್ದತಿ ಸಾಧ್ಯವೇ ಇಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ಕಾರ್ಪೊರೇಟ್‌ ಬಗ್ಗೆ ರೈತರ ಆತಂಕ
ಎಪಿಎಂಸಿ ರದ್ದಾದರೆ ಮುಂದಾಗುವ ಅಪಾಯಗಳ ಬಗ್ಗೆಯೂ ರೈತರು ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ. ಮಧ್ಯಪ್ರದೇಶದಲ್ಲಿ ವರ್ತಕರು ರೈತರಿಗೆ 2 ಕೋಟಿ ರೂ.ನ ಚೆಕ್‌ ನೀಡಿ ಮೋಸ ಮಾಡಿರುವ ಬಗ್ಗೆ ತಿಳಿಸಿದರಲ್ಲದೆ, ಹೊಸ ಕಾನೂನು ಜಾರಿಯಾದ ಬಳಿಕ ಉತ್ತರ ಪ್ರದೇಶದಲ್ಲಿ ಬೆಳೆಗಳ ಬೆಲೆ ಅರ್ಧದಷ್ಟು ಇಳಿಕೆಯಾಗಿದೆ ಎಂದಿದ್ದಾರೆ.

Advertisement

ಸರಕಾರದಿಂದಲೇ ಭೋಜನ
ಕಳೆದ ಐದು ಸಭೆಗಳಲ್ಲಿ ರೈತರು ತಾವೇ ಮಧ್ಯಾಹ್ನದ ಭೋಜನ ತಯಾರಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಸರಕಾರವೇ ಸಮುದಾಯ ಅಡುಗೆ ವ್ಯವಸ್ಥೆ ಆಯೋಜಿಸಿತ್ತು. ಇದನ್ನು ರೈತರು ಒಪ್ಪಿಕೊಂಡರು. ಅಷ್ಟೇ ಅಲ್ಲ, ರೈತರ ಜತೆಗೆ ಮೂವರು ಕೇಂದ್ರ ಸಚಿವರೂ ಭೋಜನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next