ಸಾಗರ: ತಾಲೂಕಿನ ಪಡವಗೋಡು ಗ್ರಾಮ ಪಂಚಾಯ್ತಿಯ ಮೂಡಳ್ಳಿ ಗ್ರಾಮದ ರೈತರ ಜಮೀನಿನ ಮೇಲೆ ವಿದ್ಯುತ್ ತಂತಿ ಹಾಯಿಸಿ ವಿದ್ಯುತ್ ಸಂಪರ್ಕ ನೀಡಿರುವುದನ್ನು ಖಂಡಿಸಿ ಮಂಗಳವಾರ ಮೂಡಳ್ಳಿಯ ಇತರ ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಹರೀಶ್ ಮೂಡಳ್ಳಿ, ಗ್ರಾಮದ ರೈತರ ಜಮೀನಿನ ಮೇಲೆ ವಿದ್ಯುತ್ ತಂತಿಯನ್ನು ಎಳೆದು ಸೂರಜ್ ಎಂಬುವವರಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿರುವ ಕ್ರಮ ಖಂಡನೀಯ. ಹಿಂದೆ ಈ ಮಾರ್ಗವು ರೈತರ ಜಮೀನಿನ ಮೇಲೆ ಹಾಯ್ದುಹೋಗಿದೆ ಎಂದು ಸ್ಥಗಿತಗೊಳಿಸಲಾಗಿತ್ತು. ಆದರೆ ಏಕಾಏಕಿ ಸೋಮವಾರ ಸ್ಥಗಿತಗೊಳಿಸಿದ್ದ ವಿದ್ಯುತ್ ತಂತಿಯಲ್ಲೇ ವಿದ್ಯುತ್ ಸಂಪರ್ಕ ನೀಡಿರುವ ಕ್ರಮ ಖಂಡನೀಯ. ಇದರಿಂದ ರೈತರು ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸೂರಜ್ ಆರು ತಿಂಗಳ ಹಿಂದೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ಇಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಸೋಮವಾರ ಕೆಲವು ಡೋಂಗಿ ರೈತ ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆ ನಡೆಸಿವೆ. ರೈತರಿಗೆ ಸಮಸ್ಯೆ ಆಗುತ್ತಿದ್ದರೂ ಗಮನ ಕೊಡದ ಮೆಸ್ಕಾಂ ಅಧಿಕಾರಿಗಳು ಪ್ರತಿಭಟನೆ ಒತ್ತಡಕ್ಕೆ ಮಣಿದು ವಿದ್ಯುತ್ ಸಂಪರ್ಕ ನೀಡಿದೆ. ತಕ್ಷಣ ಮೆಸ್ಕಾಂ ರೈತರ ಜಮೀನಿನ ಮೇಲೆ ತೆಗೆದುಕೊಂಡು ಹೋಗಿರುವ ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಬೇಕು. ಪ್ರತಿಭಟನೆಗೆ ಕಾಂಗ್ರೆಸ್‌ನ ಬಿ.ಆರ್.ಜಯಂತ್ ಸೇರಿದಂತೆ ಕೆಲವರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ
ಇವರಿಗೂ ಸಹ ತಪ್ಪು ಮಾಹಿತಿ ನೀಡಲಾಗಿದೆ. ಸೂರಜ್ ಅವರ ಜಮೀನಿಗೆ ಬೇರೆ ಕಡೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ನಮ್ಮ ಅಭ್ಯಂತರ ಇಲ್ಲ. ಒಂದೊಮ್ಮೆ ವಿದ್ಯುತ್ ಸಂಪರ್ಕ ತೆಗೆಯದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಗ್ರಾಮ ಸುಧಾರಣಾ ಸಮಿತಿಯ ಮಂಜಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಹೊಸದೂರು ಹಾಲಪ್ಪ, ಹುಲ್ಲತ್ತಿ ಅಣ್ಣಪ್ಪ, ಕಾರೆಕೊಪ್ಪ ಮಂಜಪ್ಪ, ನಾಗರಾಜ್, ಅಣ್ಣಪ್ಪ ಗದ್ದೆಮನೆ, ಬಸಪ್ಪ, ಕನ್ನಪ್ಪ, ರಾಮಕೃಷ್ಣ ಇನ್ನಿತರರು ಹಾಜರಿದ್ದರು.