Advertisement
ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರೈತ ಮುಖಂಡರು ನಗರದ ಗನ್‌ಹೌಸ್ ಬಳಿ ಇರುವ ಕುವೆಂಪು ಉದ್ಯಾನದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ನಾವೇನು ಕಳ್ಳರಲ್ಲ ಜಿಲ್ಲಾಧಿಕಾರಿಗೆ ನಮ್ಮ ಮನವಿ ಸಲ್ಲಿಸಲು ಅವಕಾಶ ಕೊಡಿ ಎಂದು ಪೊಲೀಸರನ್ನು ಒತ್ತಾಯಿಸಿದರು.
Related Articles
Advertisement
ಈ ವೇಳೆ ಡೀಸಿ ಕಚೇರಿಯಲ್ಲಿ ಇಲ್ಲದ ಕಾರಣ ಎಡಿಸಿ ಕವಿತಾ ರಾಜಾರಾಂ ಪ್ರತಿಭಟ ನಾಕಾರರ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಮೂರು ನಾಲ್ಕು ದಿನಗಳಲ್ಲಿ ಸಭೆ ನಡೆಸಿ ನಿಮ್ಮ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜು, ಜಿಲ್ಲಾಧ್ಯಕ್ಷ ಸೋಮಶೇಖರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಹಾಡ್ಯ ರವಿ, ಗಿರೀಶ್, ಕಿರಗಸೂರು ಶಂಕರ್, ರಾಜು, ಗೋವಿಂದರಾಜು, ಗೌರಿಶಂಕರ್, ರಾಣಿ, ಪುಟ್ಟಸುಬ್ಬಮ್ಮ, ಜಯಮ್ಮ ಇತರರು ಇದ್ದರು.
ಸಮರ್ಪಕ ವಿದ್ಯುತ್ ನೀಡಬೇಕು : ಕೃಷಿ ಪಂಪ್ ಸೆಟ್‌ಗಳಿಗೆ ಬೆಳಗ್ಗೆ 6ರಿಂದ ಸಂಜೆ 6ರವರಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕಾಡುಪ್ರಾಣಿಗಳ ದಾಳಿಯಿಂದ ರೈತರು ಭಯ ಭೀತರಾಗಿದ್ದು, ಹಗಲು ವೇಳೆ ವಿದ್ಯುತ್ ನೀಡಬೇಕು. ಭತ್ತ, ರಾಗಿ ಇತರೆ ಉತ್ಪನ್ನಗಳ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಿತಿ ವಿಧಿಸಿರುವುದನ್ನು ರದ್ದುಗೊಳಿಸಬೇಕು, ಬ್ಯಾಂಕ್‌ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ನೀತಿ ಕೈ ಬಿಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು, ರೈತನ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ.75 ರಷ್ಟು ಸಾಲ ನೀಡಬೇಕು, ಕೃಷಿ ಉತ್ಪಾದನೆಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ರಸಗೊಬ್ಬರ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಕಳಪೆ ರಸಗೊಬ್ಬರ ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ರಾಜ್ಯದಲ್ಲಿ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಸಾವಿರಾರು ರೈತರು ಈ ಕಾಯ್ದೆ ಜಾರಿಯಾದ ಮೇಲೆ ಕೃಷಿ ಉತ್ಪನ್ನಗಳನ್ನು ರಹದಾರಿ ಇಲ್ಲದ ದಲ್ಲಾಳಿಗಳಿಗೆ ಮಾರಾಟ ಮಾಡಿ, ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ರೈತರಿಗೆ ನ್ಯಾಯಬದ್ಧವಾಗಿ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.