ಮದ್ದೂರು: ಪಟ್ಟಣದ ಕೊಪ್ಪ ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು ಮೈಸೂರು, ಬೆಂಗಳೂರು ಹೆದ್ದಾರಿ ತಡೆ ನಡೆಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಕೃಷಿ ಉತ್ಪನ್ನ ಹಾಗೂ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಕಳೆದ 2 ತಿಂಗಳಿನಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಂಧಿಸಿ ಧರಣಿ ಸ್ಥಳದಲ್ಲಿದ್ದ ಟೆಂಟ್ ಕಿತ್ತೂಗೆದ ಕ್ರಮವನ್ನು ಖಂಡಿಸಿದರು.
ರೈತ ಸಂಘದ ಮುಖಂಡ ಸೋ.ಶಿ.ಪ್ರಕಾಶ್ ಮಾತನಾಡಿ, ಕೇಂದ್ರ – ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಅಧಿಕಾರಸ್ಥ ರಾಜಕಾರಣಿಗಳು ರೈತರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದು ರೈತ ಸಂಘಟನೆ ಕಳೆದ ಐದು ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿ ದ್ದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು. ಪೊ›.ಎಂ.ಡಿ.ನಂಜುಂಡಸ್ವಾಮಿ ಅವರ ಆಶಯದಂತೆ ರೈತರ ಹಕ್ಕುಗಳಿಗೆ ಒತ್ತಾಯಿಸಿದ ಪ್ರತಿಭಟನಾ ನಿರತರನ್ನು ಏಕಾಏಕಿ ಬಂಧಿಸಿ ಧರಣಿ ಸ್ಥಳದ ಟೆಂಟ್ ಹಾಗೂ ಇತರೆ ವಸ್ತುಗಳನ್ನು ಕಿತ್ತೂಗೆದ ಪೊಲೀಸರ ಕ್ರಮವನ್ನು ಖಂಡಿಸಿದರು.
ಸಂಚಾರ ವ್ಯತ್ಯಯ: ದಿಢೀರ್ ರಸ್ತೆ ತಡೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚುಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ರಲ್ಲದೇ ರಸ್ತೆತಡೆ ತೆರೆವುಗೊಳಿಸಿದರು.
ಕಾಂಗ್ರೆಸ್ ಮುಖಂಡ ಬಿ.ವಿ.ಶಂಕರೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್‌ಬಾಬು ಇದ್ದರು. ಕೆಸ್ತೂರು ವರದಿ: ಮದ್ದೂರು ತಾಲೂಕು ಆತಗೂರು ಹೋಬಳಿ ಕೆಸ್ತೂರು ಗ್ರಾಮ ದಲ್ಲಿ ರೈತ ಸಂಘದ ಕಾರ್ಯಕರ್ತರು ರಸ್ತೆತಡೆ ನಡೆಸಿದರು. ರೈತರ ಬೇಡಿಕೆಗಳ ಈಡೇರಿಕೆ ವೈಫಲ್ಯ, ಧರಣಿ ನಿರತ ರೈತರ ಮೇಲಿನ ದೌರ್ಜನ್ಯ ಹಾಗೂ ರೈತರ ಬಂಧನ ಖಂಡಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಶೋಕ್, ಚಂದ್ರಹಾಸ, ಶಿವ, ಕುಮಾರಸ್ವಾಮಿ, ಬಸವೇಗೌಡ ಕೃಷ್ಣ, ಮೋಹನ್, ಕುಮಾರ್, ಭವಿತಾ, ಸುರೇಶ್, ಕೃಷ್ಣ, ಸೂರಿ, ರವಿ ನೇತೃತ್ವ ವಹಿಸಿದ್ದರು.