ಮುಳಬಾಗಿಲು: ಮುಂಗಾರು ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ತೆರವು ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಮೇ.20 ರಂದು ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುವುದೆಂದು ತಾಲೂಕು ರೈತ ಸಂಘಧ ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ಮುಂಗಾರು ಮಳೆ ಆರ್ಭಟಕ್ಕೆ ನಲುಗಿದ ತಾಲೂಕಿನ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿಯಾಗಿರುವ ಕೆರೆ ರಾಜಕಾಲುವೆಗಳನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಮತ್ತೆ ಮುಂಗಾರು ಮಳೆ ಪ್ರಾರಂಭದಲ್ಲೇ ಜನ ಸಾಮಾನ್ಯರ ಬದುಕು ಕಸಿದುಕೊಳ್ಳುತ್ತಿದೆ ಎಂದರು.
ಇನ್ನು ಸರ್ಕಾರ ಕೆರೆ, ರಾಜಕಾಲುವೆ ಅಭಿವೃದ್ಧಿ ಪಡಿಸಲು ಕೋಟ್ಯಂತರ ರೂ. ಅನುದಾನವನ್ನು ಸಣ್ಣ ನೀರಾವರಿ ಇಲಾಖೆ ಮತ್ತು ನಗರಸಭೆಗಳಿಗೆ ಬಿಡುಗಡೆ ಮಾಡುತ್ತಿದ್ದರೂ ಸಮರ್ಪಕವಾಗಿ ಕೆರೆ, ರಾಜಕಾಲುವೆ ಅಭಿವೃದ್ಧಿಪಡಿಸದೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹಣ ಲೂಟಿ ಮಾಡುವ ಅಧಿಕಾರಿಗಳ ಬೇಜವಾಬ್ದಾರಿಗೆ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ರೈತರ ಬೆಳೆ ಹಾಗೂ ಬಡವರ ಬದುಕು ನೀರು ಪಾಲಾಗುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮಘಟ್ಟ ಧರ್ಮ ಹಾಗೂ ನಂಗಲಿ ನಾಗೇಶ್ ಮಾತನಾಡಿ, ರೈತರ ಬೆಳೆ ಸಮೀಕ್ಷೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆ ಕಣ್ಣ ಮುಂದೆಯೇ ನಾಶವಾಗಿ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಸರ್ಕಾರಕ್ಕೆ ಎದುರು ನೋಡುತ್ತಿರುವ ರೈತರಿಗೆ ಸಮರ್ಪಕವಾದ ಬೆಳೆ ಸಮೀಕ್ಷೆ ಮಾಡಿ ವರದಿ ನೀಡದ ಅಧಿಕಾರಿಗಳ ರೈತ ವಿರೋಧಿ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸುರಿದ ಮುಂಗಾರು ಮಳೆಗೆ ನಷ್ಟವಾ ಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ತೆರವುಗೊಳಿಸಿ, ಅಭಿ ವೃದ್ಧಿ ಮಾಡಿ, ಅಭಿವೃದ್ಧಿ ಹಣವನ್ನು ದುರುಪಯೋಗ ಪಡಿಸಿ ಕೊಂಡಿರುವ ಅಧಿಕಾರಿಗಳು ಹಾಗೂ ಟೆಂಡರ್ ದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು 24 ಗಂಟೆಯಲ್ಲಿ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ನಷ್ಟ ಬೆಳೆ ಹಾಗೂ ಕೊಳಚೆ ನೀರು ಸಮೇತ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುತ್ತಿಗೆ ಹಾಕಲಾಗುವುದು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಹಸಿರು ಸೇನೆ ತಾಲೂಕು ಅಧ್ಯಕ್ಷ ವೇಣು, ಯುವ ರೈತ ಮುಖಂಡ ನವೀನ್, ನಂಗಲಿ ಕಿಶೋರ್, ಕೇಶವ, ಅಣ್ಣಿಹಳ್ಳಿ ನಾಗರಾಜ್, ದೇವರಾಜ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜು ನಾಥ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಶ್ರೀಕಾಂತ್, ರಾಮಮೂರ್ತಿ, ರಾಮಕೃಷ್ಣಪ್ಪ, ಗಣೇಶ್ ಇತರರಿದ್ದರು.