ಮದ್ದೂರು: ವಿಸಿ ನಾಲಾ ವ್ಯಾಪ್ತಿಯ ತೂಬು ಮತ್ತು ನಾಲೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಚನ್ನೇಗೌಡನದೊಡ್ಡಿ ಗ್ರಾಮದ ಸ್ಥಳೀಯ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿಮಂದಿರದ ಬಳಿಯಿರುವ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಶಿಥಿಲಗೊಂಡಿರುವ ತೂಬು ಮತ್ತು ನಾಲೆಗಳನ್ನು ಕೂಡಲೇ ದುರಸ್ತಿಗೊಳಿಸಿ ಸರಾಗವಾಗಿ ನೀರು ಹರಿಯಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಬೆಳೆಗಳು ಒಣಗುವ ಸ್ಥಿತಿ: ವಿಸಿ ನಾಲಾ ವ್ಯಾಪ್ತಿಯ 26ನೇ ತೂಬು ಕಳೆದ ಎರಡು ತಿಂಗಳಿಂದಲೂ ದುರಸ್ತಿಯಲ್ಲಿದ್ದು, ನಾಲೆಗಳಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದುನಿಂತು ಹೂಳು ತುಂಬಿರುವ ಹಿನ್ನೆಲೆಯಲ್ಲಿ ಕೊನೆಭಾಗದ ಜಮೀನಿಗೆ ನೀರು ಹರಿಯದೇ ಬೆಳೆಗಳು ಒಣಗುವ ಸ್ಥಿತಿ ತಲುಪಿರುವುದಾಗಿ ವಿವರಿಸಿದರು.
ಮನವಿ ಮಾಡಿದ್ರೂ ಕ್ರಮಕೈಗೊಂಡಿಲ್ಲ: ಕಳೆದ ಬಾರಿ ವಿಸಿ ನಾಲೆಯ ಕೊನೆಯ ಭಾಗದ ರೈತರ ಜಮೀನಿಗೆ ನೀರು ಹರಿಯದ ಕಾರಣ ಕಬ್ಬು, ರಾಗಿ, ಬಾಳೆ ಇನ್ನಿತರೆ ಬೆಳೆಗಳು ಒಣಗಿ ಲಕ್ಷಾಂತರ ರೂ. ನಷ್ಟ ಸಂಭ ವಿಸಿತ್ತು. ತೂಬು ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿದರು.
ನೀರು ಬಂದಾಗ ಬರ್ತಾರೆ: ಕರ್ತವ್ಯನಿರತ ಅಧಿಕಾರಿಗಳು, ನೀರು ಗಂಟಿಗಳು ಕೇವಲ ನಾಲೆಯಲ್ಲಿ ನೀರು ಬಂದ ವೇಳೆ ಕಾಟಾಚಾರಕ್ಕೆ ಆಗಮಿಸಿ ತೆರಳುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದು, ಇದುವರೆಗೂ ನಾಲೆ ಹಾಗೂ ತೂಬುಗಳ ದುರಸ್ತಿಗೆ ಮುಂದಾಗಿಲ್ಲ. ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ವಿವರಿಸಿದರು.
ಕಚೇರಿಗೆ ಮುತ್ತಿಗೆ: ನಾಲೆ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಕುಂಟು ನೆಪಹೇಳುವ ಅಧಿಕಾರಿಗಳು, ಈ ವ್ಯಾಪ್ತಿಯ ನಾಲೆಗಳು ಹದಗೆಡಲು ಕಾರಣವಾಗಿ ದ್ದಾರೆ. ರೈತರು, ಹಗಲು ರಾತ್ರಿ ಎನ್ನದೆ ತಮ್ಮ ಜಮೀನಿಗೆ ನೀರು ಹರಿಸಬೇಕಾದ ಸ್ಥಿತಿ ಬಂದೊದಗಿದೆ. ಕೂಡಲೇ ಅಗತ್ಯ ಕ್ರಮವಹಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
ನೀರು ಹರಿಸುವ ಭರವಸೆ: ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಇ ಚಂದ್ರಶೇಖರ್ ವಿಸಿ ನಾಲಾ ವ್ಯಾಪ್ತಿಯ ತೂಬುಗಳ ದುರಸ್ತಿ ಹಾಗೂ ನಿರ್ವಹಣೆಗೆ ಈಗಾಗಲೇ ಇಲಾಖೆ ಅಗತ್ಯ ಕ್ರಮವಹಿಸಿದ್ದು, ಮುಂದಿನ ದಿನಗಳಲ್ಲಿ ನಾಲೆಗಳಲ್ಲಿ ಬೆಳೆದುನಿಂತಿರುವ ಗಿಡಗಂಟಿ ತೆರವುಗೊಳಿಸಿ ಸರಾಗವಾಗಿ ಕೊನೆಭಾಗದ ರೈತರ ಜಮೀನಿಗೆ ನೀರು ಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ವೇಳೆ ಸ್ಥಳೀಯ ಮುಖಂಡರಾದ ಕಾಡಪ್ಪ, ರಾಜಣ್ಣ, ಪುಟೀರ, ಮಧು, ಚಿಕ್ಕೋನು, ಶಿವಣ್ಣ, ಶಿವಕುಮಾರ್, ಜಯರಾಮ್, ಚೌಡಪ್ಪ, ಶ್ಯಾಮ್‌ಸುಂದರ್ ನೇತೃತ್ವ ವಹಿಸಿದ್ದರು.