Advertisement

ಪ್ರತಿಭಟನೆ ತೀವ್ರಗೊಳಿಸುವ ಬೆದರಿಕೆ : ಷರತ್ತುಬದ್ಧ ಮಾತುಕತೆ ಬೇಕಿಲ್ಲ ಎಂದ ರೈತರು

07:23 AM Nov 30, 2020 | Suhan S |

ಹೊಸದಿಲ್ಲಿ: “ಸರಕಾರದೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಯಾವುದೇ ಷರತ್ತುಗಳನ್ನೂ ಒಪ್ಪಲು ತಯಾರಿಲ್ಲ.’

Advertisement

ಹೀಗೆಂದು ಹೇಳಿರುವುದು ಕಳೆದ ಮೂರು ದಿನಗಳಿಂದಲೂ ದಿಲ್ಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು. ಸರಕಾರ ಬೇಗನೆ ಮಾತುಕತೆ ನಡೆಸಬೇಕೆಂದರೆ ನೀವು ಧರಣಿ ಸ್ಥಳವನ್ನು ಸಿಂಘುವಿನಿಂದ ಬುರಾರಿ ಮೈದಾನಕ್ಕೆ ಸ್ಥಳಾಂತರಿ ಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಫ‌ರ್‌ ಅನ್ನು ಸಾರಾಸಗಟಾಗಿ ತಿರಸ್ಕರಿಸಿರುವ ರೈತರು, ನಾವು ಷರತ್ತುಬದ್ಧ ಮಾತುಕತೆಗೆ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರವಿವಾರ 30 ರೈತ ಸಂಘಟನೆಗಳು ಸಭೆ ನಡೆಸಿದ ಬಳಿಕ ಅನ್ನದಾತರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಬುರಾರಿ ಮೈದಾನಕ್ಕೆ ತೆರಳುವುದಿಲ್ಲ. ಅದೊಂದು “ಓಪನ್‌ ಜೈಲು’ ಎಂಬುದು ನಮಗೆ ಗೊತ್ತಿದೆ. ಬೇಷರತ್‌ ಮಾತುಕತೆ ನಡೆಸುವುದಿದ್ದರೆ ಮಾತ್ರ ನಾವೂ ಸರಕಾರದ ಜತೆ ಮಾತನಾಡುತ್ತೇವೆ. ಆದರೆ, ಸರಕಾರದ ಷರತ್ತುಗಳನ್ನೆಲ್ಲ ಒಪ್ಪಲು ಸಾಧ್ಯವಿಲ್ಲ. ಸಿಂಘು ಮತ್ತು ಟಿಕ್ರಿಯಲ್ಲೇ ಇದ್ದು ಪ್ರತಿಭಟನೆ ತೀವ್ರಗೊಳಿಸುತ್ತೇವೆ. ಅಷ್ಟೇ ಅಲ್ಲ, ದಿಲ್ಲಿ ಯ ಎಲ್ಲ 5 ಪ್ರವೇಶ ಮಾರ್ಗಗಳನ್ನೂ ಬ್ಲಾಕ್‌ ಮಾಡುತ್ತೇವೆ ಎಂದೂ ರೈತರು ಎಚ್ಚರಿಸಿದ್ದಾರೆ.

ವಿವರಣೆ ಬೇಕಿಲ್ಲ, ಪರಿಹಾರ ಬೇಕು: ಕೊರೆಯುವ ಚಳಿಯಲ್ಲೂ ಮತ್ತೂಂದು ರಾತ್ರಿಯನ್ನು ರಸ್ತೆಯಲ್ಲೇ ಕಳೆದಿರುವ ಸಾವಿ ರಾರು ರೈತರು, ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನದಾತರ ಬೇಡಿಕೆ ಈಡೇರಿಸುವ ವಿಚಾರದಲ್ಲಿ ಸರಕಾರ ನಿಜಕ್ಕೂ ಗಂಭೀರವಾಗಿದ್ದರೆ, ಷರತ್ತು ವಿಧಿಸುವುದನ್ನು ನಿಲ್ಲಿಸಲಿ. ಮಾತುಕತೆಗೆ ಕರೆದು ಕಾಯ್ದೆಯ ವಿವರಣೆ ನೀಡುವುದು ನಮಗೆ ಬೇಕಿಲ್ಲ. ನಮ್ಮ ಬೇಡಿಕೆ ಈಡೇರಿಸಲಿ ಎಂದೂ ರೈತ ಸಂಘಟನೆಗಳು ಹೇಳಿವೆ.

ಮತ್ತೂಮ್ಮೆ ಮನವಿ :

Advertisement

ಇದೇ ವೇಳೆ, ಬುರಾರಿ ಮೈದಾನಕ್ಕೆ ಪ್ರತಿಭಟನೆ ಸ್ಥಳಾಂತರಿಸುವಂತೆ ರೈತರಿಗೆ ಕೇಂದ್ರ ಸರಕಾರ ಮತ್ತೂಮ್ಮೆ ಮನವಿ ಮಾಡಿದೆ. ಮಾತುಕತೆಗೆ ಕೇಂದ್ರ ಸಚಿವರ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಪ್ರತಿಭಟನ ಕಾರರು ಬುರಾರಿಗೆ ತೆರಳಿದ ಕೂಡಲೇ ವಿಜ್ಞಾನ ಭವನದಲ್ಲಿ ಮಾತುಕತೆಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದಿದೆ.

ಕಾಂಗ್ರೆಸ್‌ ವಾಗ್ಧಾಳಿ :

62 ಕೋಟಿ ರೈತರಿಗೆ ಸಂಬಂಧಿಸಿದ ಕಾಯ್ದೆಗಳಿಗೆ ಕೇಂದ್ರ ಸರಕಾರವು ಅಕ್ರಮವಾಗಿ ಮತ್ತು ಅಸಾಂವಿಧಾನಿಕವಾಗಿ ಸಂಸತ್‌ನಲ್ಲಿ ಅಂಗೀಕಾರ ಪಡೆದಿದೆ. ಸರಕಾರಕ್ಕೆ ಅನ್ನದಾತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಇದೇ ವೇಳೆ, ರೈತರನ್ನು ಭಯೋ ತ್ಪಾದಕರು- ಖಲಿಸ್ಥಾನಿಗಳು ಎಂದು ಕರೆದ ಬಿಜೆಪಿ ನಾಯಕರು ಕೂಡಲೇ ಕ್ಷಮೆಯಾಚಿ ಸಬೇಕು, ಸರಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದೂ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲ ಆಗ್ರಹಿಸಿದ್ದಾರೆ.

ಕಾರಿಗೆ ಬೆಂಕಿ: ವ್ಯಕ್ತಿ ಸಜೀವ ದಹನ : ದಿಲ್ಲಿ  ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಾಥ್‌ ನೀಡಲೆಂದು ಆಗಮಿಸಿದ್ದ ಪಂಜಾಬ್‌ನ 55 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲೇ ಸಜೀವದಹನವಾಗಿದ್ದಾರೆ. ದಿಲ್ಲಿ -ಹರಿಯಾಣ ಗಡಿಯಲ್ಲಿ ಶನಿವಾರ ರಾತ್ರಿ ಕಾರಿನಲ್ಲಿ ಮಲಗಿದ್ದಾಗ, ಹಠಾತ್ತನೆ ಕಾರಿಗೆ ಬೆಂಕಿ ಹತ್ತಿಕೊಂಡು ಈ ದುರ್ಘ‌ಟನೆ ಸಂಭವಿಸಿದೆ. ಅವರ ನಿಧನಕ್ಕೆ ರೈತ ಸಂಘಟನೆಗಳು ಕಂಬನಿ ಮಿಡಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next