Advertisement

ರಾಷ್ಟ್ರೀಯ ಕೃಷಿ ನೀತಿ ಜಾರಿಯಿಂದ ರೈತರ ಪ್ರಗತಿ

07:12 AM Feb 05, 2019 | |

ಮೈಸೂರು: ರೈತರ ಸಾಲಮನ್ನಾ ಜೊತೆಗೆ ಸುಸ್ಥಿರ ಕೃಷಿ ಉತ್ತೇಜಿಸಲು ಸಮ್ಮಿಶ್ರ ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿದೆ. ರೈತನ ಬೆಳೆಗೆ ಉತ್ತಮ ಬೆಲೆ ಸಿಗಲು ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ಸ್ಥಿರೀಕರಣ ಆಗಬೇಕಿರುವುದ ರಿಂದ ರಾಷ್ಟ್ರೀಯ ಕೃಷಿ ನೀತಿ ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಹೇಳಿದರು.

Advertisement

ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಗಳವರ ಜಾತ್ರಾ ಮಹೋತ್ಸವದಲ್ಲಿ ಸೋಮ ವಾರ ಆಯೋಜಿಸಿದ್ದ ರೈತರ ಆದಾಯ ದ್ವಿಗುಣ-ಅವಕಾಶಗಳು ಹಾಗೂ ಸವಾಲುಗಳು ವಿಷಯ ಕುರಿತ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲಮನ್ನಾದಿಂದ ರೈತರ ಸಮಸ್ಯೆ ಸಂಪೂರ್ಣ ಬಗೆಹರಿಯಲ್ಲ ನಿಜ. ಆದರೆ, ಸಂಕಷ್ಟಕ್ಕೆ ಸಿಲುಕಿರುವ ರೈತನ ಹೊರೆ ತಗ್ಗಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಇದರ ಜೊತೆಗೆ ರಾಜ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಿದೆ ಎಂದರು.

ರೈತರ ಆತ್ಮಹತ್ಯೆ ಆತಂಕದ ವಿಷಯ. ನೀರಾವರಿಯನ್ನೇ ಕಾಣದೆ ಮಳೆ ಆಶ್ರಯದಲ್ಲಿ ಕೃಷಿ ಮಾಡುವ ಕೋಲಾರ ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕಡಿಮೆ. ಆದರೆ, ನೀರಾವರಿ ಪ್ರದೇಶದಲ್ಲೇ ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದಕ್ಕೆ ಸಾಲದ ಜೊತೆಗೆ ಬೇರೆ ಕಾರಣವು ಇರಬಹುದು. ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದರು.

ಸುಸ್ಥಿರ ಕೃಷಿ: ಕೃಷಿ ಸಂಕೀರ್ಣವಾಗಿರುವ ಕ್ಷೇತ್ರ, ಬಹಳಷ್ಟು ಸಮಸ್ಯೆಗಳು ಈ ಕ್ಷೇತ್ರ ದಲ್ಲಿವೆ. ಆದರೂ ರೈತರು ಕೃಷಿಯಿಂದ ವಿಮುಖ ವಾಗಬಾರದು. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಹೆಚ್ಚು ಬೆಳೆಯಲೇ ಬೇಕಾಗುತ್ತದೆ. ಹೀಗಾಗಿ ಸುಸ್ಥಿರ ಕೃಷಿಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ರಾಜ್ಯದಲ್ಲಿ 2.50 ಲಕ್ಷ ಕೃಷಿ ಹೊಂಡಗಳ ನಿರ್ಮಾಣ, ಹನಿ ನೀರಾವರಿ, ತುಂತುರು ನೀರಾವರಿಗೆ ಒತ್ತು ನೀಡಿದೆ. ಕೃಷಿ ಯಾಂತ್ರೀಕರಣ, ಹೋಬಳಿ ಮಟ್ಟದಲ್ಲಿ ಬಾಡಿಗೆ ಆಧಾರದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ನೀಡುವ ಕಾರ್ಯ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

Advertisement

ಗುಡಿ ಕೈಗಾರಿಕೆಗಳ ನಾಶ: ಮಾಜಿ ಸಚಿವ ಸಿ.ಎಚ್.ವಿಜಯಶಂಕರ್‌ ಮಾತನಾಡಿ, ಕೃಷಿ ಮತ್ತು ಗ್ರಾಮೀಣ ಬದುಕು ಸಂಪೂರ್ಣ ಬದಲಾಗಿದೆ. 50 ವರ್ಷಗಳ ಹಿಂದೆ ಹಳ್ಳಿಗಳು ಸ್ವಾವಲಂಬಿಗಳಾಗಿದ್ದವು, ಕೃಷಿ ಹಾಗೂ ಕೃಷಿ ಆಧಾರಿತ ಗುಡಿ ಕೈಗಾರಿಕೆಗಳು ವಿನಾಶದ ಅಂಚಿಗೆ ಬಂದು ನಿಂತಿರುವುದರಿಂದ ಇಂದು ಹಳ್ಳಿಗಳು ನಗರಗಳ ಮೇಲೆ ಅವಲಂಬಿತ ವಾಗಿವೆ. ಬಹುರಾಷ್ಟ್ರೀಯ ಕಂಪನಿಗಳ ಪರಿಣಾಮದಿಂದ ಗುಡಿ ಕೈಗಾರಿಕೆಗಳು ಮರೆಯಾಗುತ್ತಿವೆ ಎಂದರು.

ಅರಣ್ಯ ಪ್ರೋತ್ಸಾಹ ಯೋಜನೆ: ದೇಶದಲ್ಲಿ ಯಥೇಚ್ಛವಾಗಿ ಜಲಸಂಪತ್ತಿದ್ದರೂ ಅದರ ಸದ್ಬಳಕೆ ಆಗಲಿಲ್ಲ. 50 ವರ್ಷಗಳ ಹಿಂದೆಯೇ ಅಂದಿನ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ರಾವ್‌ ಗಂಗಾ-ಕಾವೇರಿ ನದಿ ಜೋಡಣೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದರೂ ಈವರೆಗೆ ಅನುಷ್ಠಾನವಾಗಲಿಲ್ಲ. ಕೃಷಿ ಪ್ರಧಾನವಾದ ಭಾರತದಲ್ಲಿ ರಾಷ್ಟ್ರೀಯ ಕೃಷಿ ನೀತಿ, ಜಲ ನೀತಿ, ಶಿಕ್ಷಣ ನೀತಿಗಳೇ ಇಲ್ಲ. ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶವನ್ನು ಕೈಗಾರಿಕಾ ಪ್ರದೇಶ ಮಾಡಲಾಗಿದೆ. ಮೈಸೂರು ವಿಳ್ಯದೆಲೆ ತೋಟ ನಾಶವಾಗಿದೆ.

ಉಳಿಸುವ ಪ್ರಯತ್ನ ಸರ್ಕಾರದಿಂದ ಆಗಲೇ ಇಲ್ಲ. ಮೈಸೂರು ಸುತ್ತಲಿನ ಸಾವಿರಾರು ಎಕರೆ ಭೂಮಿ ರೈತರ ಕೈತಪ್ಪಿದೆ. ಅತೀವೃಷ್ಟಿ-ಅನಾವೃಷ್ಟಿ, ಮಾರುಕಟ್ಟೆ ಏರಿಳಿತಗಳಿಂದ ರೈತ ಸಮಸ್ಯೆಗೆ ಸಿಲುಕಿದ್ದಾನೆ. ಹೀಗಾಗಿ ತಾವು ಅರಣ್ಯ ಮಂತ್ರಿಯಾಗಿದ್ದಾಗ ಜಾರಿಗೆ ತಂದಿರುವ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮಾದರಿಯಲ್ಲಿ ಕೃಷಿ ಇಲಾಖೆಯೂ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಕನಕಪುರ ದೇಗುಲ ಮಠದ ಡಾ.ಮುಮ್ಮಡಿ ನಿರ್ವಾಣ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಶಾಸಕ ಅನಿಲ್‌ ಚಿಕ್ಕಮಾದು ಕೃಷಿ ಕಾಯಕ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗ್ಡೆ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ವಿಶ್ರಾಂತ ಕುಲಪತಿ ಡಾ. ಎಂ. ಮಹದೇವಪ್ಪ, ವಾಗ್ಮೀ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿದರು.

ಅರಣ್ಯಾಧಾರಿತ ಕೃಷಿ ಜನಪ್ರಿಯಗೊಳಿಸಿ: ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ಸಾಲಮನ್ನಾ, ರೈತರ ಖಾತೆಗೆ ಹಣ ಜಮೆ ಮಾಡುವುದರಿಂದ ರೈತನ ಆದಾಯ ದ್ವಿಗುಣವಾಗುವುದಿಲ್ಲ. ಬದಲಿಗೆ ಕೆರೆ-ಕಟ್ಟೆ ತುಂಬಿಸಿ, ಕೃಷಿಗೆ ನೀರು ಒದಗಿಸುವ ಕೆಲಸವಾಗಬೇಕು. ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಬೇಕು. ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು.

ಅರಣ್ಯ ಆಧಾರಿತ ಕೃಷಿಯನ್ನು ಜನಪ್ರಿಯಗೊಳಿಸಬೇಕು. ತಾಲೂಕಿಗೊಂದು ನರ್ಸರಿ ಸ್ಥಾಪಿಸಿ, ಕೃಷಿ, ತೋಟ ಗಾರಿಕೆ ಹಾಗೂ ಅರಣ್ಯ ಇಲಾಖೆಗಳನ್ನು ಒಗ್ಗೂಡಿಸಿ ಯೋಜನೆಗಳನ್ನು ಜಾರಿಗೆ ತಂದಾಗ ರೈತರಿಗೆ ಅನುಕೂಲ ವಾಗಲಿದೆ ಎಂದರು. ಪ್ರಗತಿಪರ ರೈತ ವಿ.ಕಾಂತರಾಜು, ರೈತರು ಬಿತ್ತನೆ ಬೀಜಕ್ಕೆ ಪರಾವಲಂಬಿ ಗಳಾಗದೆ ಮನೆಯಲ್ಲೇ ಬೀಜ ಸಂಗ್ರಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next