ದಾವಣಗೆರೆ: ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಇಲ್ಲಸಲ್ಲದ ಸುಳ್ಳು ಆಪಾದನೆ ಮಾಡಿದ ಶಾಸಕ ರೇಣುಕಾಚಾರ್ಯ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ಅವರಿಗೆ ಮಸಿ ಹಚ್ಚುವ, ಕಪ್ಪು ಬಟ್ಟೆ ಪ್ರದರ್ಶಿಸುವ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಎಚ್ಚರಿಕೆ ನೀಡಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಢೋಂಗಿ ರಾಜಕಾರಣಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೊಣಕಾಲಷ್ಟು ಸಹ ನೀರಿಲ್ಲದನೀರಲ್ಲಿ ತೆಪ್ಪ ಚಾಲನೆ ಮಾಡಿದ್ದು, ನರ್ಸ್‌ಳೊಂದಿಗಿನ ಅಸಭ್ಯ ವರ್ತನೆ ಹೀಗೆ ಅನೇಕ ಡೋಂಗಿ ಕೆಲಸಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಂಥ ವ್ಯಕ್ತಿ ಈಗ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಆರೋಪ ಮಾಡುತ್ತಿದ್ದು ಮುಖ್ಯಮಂತ್ರಿಯವರು ಕೂಡಲೇ ಇವರ ಬಾಯಿಗೆ ಬೀಗ ಹಾಕಬೇಕು.ಇಲ್ಲದಿದ್ದರೆ ಮುಖ್ಯಮಂತ್ರಿ ವಿರುದ್ಧವೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ರೇಣುಕಾಚಾರ್ಯ ಶಾಸಕರಾಗುವ ಮೊದಲು ಬೋರ್‌ವೆಲ್ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಶಾಸಕರಾದ ಬಳಿಕ ಅವರ ಆಸ್ತಿ, ಅಕ್ರಮ ಸಂಪಾದನೆಎಷ್ಟಾಗಿದೆ ಎಂಬುದನ್ನು ಮುಖ್ಯಮಂತ್ರಿಯವರು ಕೂಲಂಕುಷ ತನಿಖೆ ನಡೆಸಬೇಕು. ಅಕ್ರಮವಾಗಿದ್ದರೆ ಕ್ರಮ ಕೈಗೊಂಡು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದೇ ರೀತಿ ಕೋಡಿಹಳ್ಳಿ ಚಂದ್ರಶೇಖರ ಅವರ ಆಸ್ತಿಯನ್ನೂ ತನಿಖೆ ನಡೆಸಿ, ಅಕ್ರಮವಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.
ಆರೋಪ ಸಾಬೀತುಪಡಿಸಲಿ: ಕೋಡಿಹಳ್ಳಿ ಚಂದ್ರಶೇಖರ ಅವರು ಯಾರನ್ನೋ ನಂಬಿಸಿವಂಚಿಸಿದ್ದಾರೆ, ರೈತರಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ, ಅಕ್ರಮ ಆಸ್ತಿ ಮಾಡಿದ್ದಾರೆ ಎಂದೆಲ್ಲ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. ಅವರ ಈ ಆರೋಪ ನಿಜವೇ ಆಗಿದ್ದರೆ ದಾಖಲೆಗಳೊಂದಿಗೆಸಾಬೀತುಪಡಿಸಿ ಅವರ ಮೇಲೆ ಕ್ರಮ ಜರುಗಿಸುವಕೆಲಸ ಮಾಡಬೇಕು. ರೇಣುಕಾಚಾರ್ಯರು ಶಾಸಕರಾಗುವ ಮೊದಲು ಎಷ್ಟು ಆಸ್ತಿ ಹೊಂದಿದ್ದರು, ಈಗ ಅವರ ಆಸ್ತಿ ಎಷ್ಟಾಗಿದೆ ಎಂಬುದರ ಬಗ್ಗೆ ನಾವೂ ಮಾಹಿತಿ ಕೊಡುತ್ತೇವೆ ಎಂದರು.
ರೈತ ಸಂಘದ ಪ್ರಮುಖರಾದ ಕರೇಕಟ್ಟೆ ಕಲಿಂವುಲ್ಲಾ, ಮಂಜುನಾಥ್ ಮಲ್ಲಶೆಟ್ಟಿಹಳ್ಳಿ, ಬಸವರಾಜ ದಾಗಿನಕಟ್ಟೆ, ಪ್ರಶಾಂತ್ ಮತ್ತೂರು ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಸಿಎಂ ಕೂಡ ಕ್ಷಮೆ ಕೇಳಲಿ : ರೇಣುಕಾಚಾರ್ಯ ಅವರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವುದರಿಂದ ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ರೈತರ ಕ್ಷಮೆ ಕೇಳಬೇಕು.ರೇಣುಕಾಚಾರ್ಯ ಆಸ್ತಿ ತನಿಖೆ ಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರಆಸ್ತಿ ತನಿಖೆಗೂ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಎಚ್ಚರಿಸಿದರು.