Advertisement

ರೈತರ ಪರಿಶ್ರಮ ಅರಿಯಬೇಕಿದೆ

10:47 PM Aug 30, 2020 | Karthik A |

ದೇಶದ ಬೆನ್ನೆಲುಬು ರೈತ. ಆತನ ಬೆವರು ಹನಿಯೂ ಶ್ರಮದ ಅನ್ವರ್ಥಕ.

Advertisement

ಜೀವನದಲ್ಲಿ ಕಷ್ಟಪಟ್ಟು ಬಿಸಿಲು, ಮಳೆ ಎನ್ನದೇ ಮೈ ಬಗ್ಗಿಸಿ ದುಡಿದು ಬೆಳೆ ಬೆಳೆಯುತ್ತಾನೆ.

ಫ‌ಸಲು ಬೆಳೆದು ಮಾರಾಟ ಮಾಡುತ್ತಾನೆ. ಲಾಭಕ್ಕಿಂತ ಹೆಚ್ಚು ಆತನ ಫ‌ಸಲಿನಿಂದ ನಾವೆಲ್ಲರೂ ಮೂರು ಹೊತ್ತು ಊಟ ಮಾಡುತ್ತೇವೆ.

ಆದರೆ ಆತನ ಜೀವನದ ಬಗ್ಗೆ ನಾವೇನೂ ಚಿಂತಿಸುವುದಿಲ್ಲ ಎಂಬುದು ಲೋಕರೂಢಿ.

ದೇಶದಲ್ಲಿ ಕೃಷಿಕರು ಇಲ್ಲದಿದ್ದರೇ ದೇಶವೇ ಉಪವಾಸದಿಂದ ಮಲಗಬೇಕಾಗುತ್ತದೆ ಎಂಬುದು ಗಾದೆಯಷ್ಟೇ ರೂಢಿಯಾಗಿದೆ.

Advertisement

ಆದರೆ ಆತನದು ಬೆಂಕಿಯಲ್ಲಿ ಬೆಂದ ಜೀವನ. ಇಡೀ ದಿನದ ಸಮಯ, ದೇಹ, ಮನಸ್ಸೆಲ್ಲ ಆತ ತನ್ನ ಫ‌ಸಲಿಗಾಗಿ ಇಡುತ್ತಾನೆ. ಇದರಲ್ಲಿ ತನ್ನ ಒಪ್ಪೊತ್ತಿನ ಊಟವನ್ನು ಕೂಡ ಮರೆತು ಬಿಡುತ್ತಾನೆ. ರಾಜಕಾರಣಿಗಳ ಭಾಷಣದಲ್ಲಿ ಬಂದೊಗುವ ರೈತನು ದೇಶದ ಬೆನ್ನೆಲುಬು ಎಂಬ ಮಾತು ಬಿಟ್ಟರೇ ಆತನ ಕಷ್ಟ, ಸುಖಕ್ಕೆ ನೆರವಾಗುವುದು ತುಂಬಾ ಕಡಿಮೆ. ಈ ನಡುವೆ ನಾವು ರೈತ ಮತ್ತು ಕೃಷಿ ಕ್ಷೇತ್ರದ ಬಗ್ಗೆ ಧನಾತ್ಮಕ ಚಿಂತನೆ ಮಾಡುವುದು ಅಗತ್ಯವಿದೆ.

ಉದ್ಯೋಗಕ್ಕಾಗಿ ಎಷ್ಟೋ ಜನರು ಊರು ತೊರೆದು ನಗರಕ್ಕೆ ಹೋದರೆ, ರೈತ ಮಾತ್ರ ತನಗೆ ಏನೇ ಕಷ್ಟ ಬಂದರೂ ಎದೆಗುಂದದೆ ಕೃಷಿ ಕಾಯಕದಲ್ಲಿ ಮುಂದಾಗುತ್ತಾನೆ. ಆದರೆ ದಿಢೀರನೆ ಅಪ್ಪಳಿಸಿದ ಕೊರೊನಾದಿಂದಾಗಿ ಆತನ ಬದುಕು ನಿಂತ ನೀರಾಗಿದೆ. ಜಮೀನಿನಲ್ಲಿ ಕಟಾವಿಗೆ ಬಂದ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ಮಾರುಕಟ್ಟೆಯ ಸಮಸ್ಯೆ ಉಂಟಾಗುತ್ತದೆ. ಹೀಗೆ ರೈತನ ಬದುಕಿನ ಉದ್ದಕ್ಕೂ ಸೋಲಿನ ಸರಮಾಲೆಗಳು. ಈಗಲೂ ಅದೇ ಪರಿಸ್ಥಿತಿ ಎಲ್ಲಿಗೆ ಹೋಗಬೇಕು ಈ ರೈತ. ಸರಕಾರಗಳು ರೈತರ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ಕೆಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಆದರೆ ಅವುಗಳ ಲಾಭ ರೈತರಿಗೆ ಎಷ್ಟರ ಮಟ್ಟಿಗೆ ತಲುಪುತ್ತಿದೆ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇವೆ.

ಕೊರೊನಾ ಬಂತು ಎಂದು ನಗರಗಳನ್ನು ತೊರೆದು ಹಳ್ಳಿಗಳಿಗೆ ಮರಳಿದ ಘಟನೆಗಳು ಸಾಕಷ್ಟಿವೆ. ಅದೇ ರೀತಿ ರೈತನೂ ಜೀವನ ನಡೆಸುವುದು ಕಷ್ಟ ಎಂದು ಬೇಸಾಯ ಮಾಡುವುದನ್ನು ಬಿಟ್ಟು ಬೇರೆ ವೃತ್ತಿಗೆ ತಿರುಗಿದ್ದರೆ ನಮ್ಮೆಲ್ಲರ ಗತಿ ಏನಾಗುತ್ತಿತ್ತು ಎಂದು ಯೋಚನೆ ಮಾಡಬೇಕು. ರೈತ ಬೆಳೆದ ಆಹಾರ ಧಾನ್ಯಗಳು ಕಡಿಮೆ ಬೆಲೆಯಲ್ಲಿ ದೊರೆಯಬೇಕು. ಆದರೆ ರೈತನ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಬಾರದೇ? ಕೇವಲ ಸೆಲೆಬ್ರಿಟಿಗಳು ಮಾತ್ರ ಹೀರೋಗಳಲ್ಲ. ರೈತರು ನಿಜವಾದ ಹೀರೋಗಳು. ರೈತರಿಗೆ ಸರಿಯಾದ ಗೌರವವನ್ನು ನೀಡುವುದು ಪ್ರತಿಯೊಬ್ಬನ ಕರ್ತವ್ಯ.

 ರಂಜನ್‌ ಪಿ.ಎಸ್‌., ಸಂತ ಫಿಲೋಮಿನಾ  ಕಾಲೇಜು, ಮೈಸೂರು 

 

 

Advertisement

Udayavani is now on Telegram. Click here to join our channel and stay updated with the latest news.

Next