ಪಿರಿಯಾಪಟ್ಟಣ: ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತ ಹಣ ನೀಡದ ರೈತರ ರಾಗಿಯನ್ನು ಖರೀದಿ ಮಾಡದೆ ಇಲ್ಲಸಲ್ಲದ ಸಬೂಬು ಹೇಳುತ್ತಾ ರೈತರನ್ನು ಗೋಳಾಡಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ತಾಲೂಕು ಆಡಳಿತ ಭವನದ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರೈತರು ತಮ್ಮ ರಾಗಿಯನ್ನು ರಾಗಿ ಖರೀದಿ ಕೇಂದ್ರಕ್ಕೆ ಮಾರಾಟಕ್ಕೆಂದು ತಂದು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ರಾಗಿ ಖರೀದಿ ಕೇಂದ್ರಕ್ಕೆ ಬಾರದೆ ಇಲ್ಲಸಲ್ಲದ ನೆಪವೊಡ್ಡಿ ಹಣನೀಡುವವರಿಗಷ್ಟೇ ಟೋಕನ್ ನೀಡಿ ಸಾಮಾನ್ಯ ರೈತರ ಕೈಗೆ ಸಿಗದೆ ಪರಾರಿಯಾಗುತ್ತಿದ್ದರು. ಅಧಿಕಾರಿಗಳ ನಡೆಯಿಂದ ಕೋಪಗೊಂಡಿದ್ದ ರೈತರು ತಾಲ್ಲೂಕು ಆಡಳಿತ ಭವನದ ಮುಂಭಾಗ ಜಮಾಯಿಸಿ ತಹಶೀಲ್ದಾರ್ ಚಂದ್ರಮೌಳಿಯವರಿಗೆ ಖರೀದಿ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕ್ರಮ ಜರುಗಿಸಲು ಒತ್ತಾಯ: ಖರೀದಿ ಕೇಂದ್ರದ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ರೈತರ ವಿಶ್ರಾಂತಿ ಗೃಹ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಲ್ಲ, ಖರೀದಿಯಾದ ರಾಗಿಯನ್ನು ಸಾಗಣೆ ಮಾಡಲು ಲಾರಿಗಳನ್ನು ಕಳುಹಿಸಿಲ್ಲ ಈ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಆಗ್ರಹಿಸಿದ್ದಾರೆ.
ಬಡ ರೈತರಿಗೆ ಅನ್ಯಾಯ: ಇಲ್ಲಿನ ಅಧಿಕಾರಿಗಳು ಕಳೆದೆರೆಡು ದಿನಗಳಿಂದ ಕಾಯ್ದು ಕುಳಿತಿದ್ದ ರೈತರನ್ನು ಕೈಬಿಟ್ಟು ಲಂಚ ನೀಡಿದ ಕೆಲವೇ ರೈತರಿಗೆ ಟೋಕನ್ ನೀಡಿ ಅವರ ರಾಗಿಯನ್ನು ಖರೀದಿ ಮಾಡುತ್ತಿದ್ದಾರೆ. ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿಸರ್ಕಾರ ಸತ್ತು ಹೋಗಿದೆ. ಸಚಿವರುಗಳುಎಲ್ಲಿಗೆ ಹೋಗಿದ್ದಾರೆಂಬುದು ಗೊತ್ತಿಲ್ಲ,ಅವರಿಗೆ ರೈತರ ಸಮಸ್ಯೆ ಆಲಿಸಿ ಬಗೆಹರಿಸುವ ಮನಸ್ಥಿತಿಯಿಲ್ಲ. ಆದ್ದರಿಂದ ಈ ಸಮಸ್ಯೆ ಪರಿಹರಿಸಲು ತಾಲೂಕು ಆಡಳಿತ ಮುಂದಾಗಬೇಕು.ಇಲ್ಲವಾದಲ್ಲಿ ರೈತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
ಶ್ರೀನಿವಾಸ್ ಆರ್.ತುಂಗ ರೈತ ಮುಖಂಡ.