ಯಳಂದೂರು: ತಾಲೂಕಿನ ರೈತರು ಭತ್ತ ಬಿತ್ತಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಭತ್ತದ ಬಿತ್ತನೆ ಬೀಜ ಖರೀದಿಗೆ ಪಟ್ಟಣ ಕೃಷಿ ಇಲಾಖೆ ಕಚೇರಿ ಹಾಗೂ ಭತ್ತ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
ಯಳಂದೂರು ಅರೆ ನೀರಾವರಿ ಪ್ರದೇಶವಾಗಿದ್ದು, ಪ್ರತಿ ವರ್ಷ ಜುಲೈನಲ್ಲಿ ಕಬಿನಿ ಜಲಾಶಯದಿಂದ ನಾಲೆಗೆ ನೀರು ಬಿಡಲಾಗುತ್ತದೆ. ಆ ನಂತರ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ರೈತರು, ಭತ್ತದ ಬಿತ್ತನೆ ಮಾಡುತ್ತಾರೆ. ಅದರಂತೆ ಪ್ರಸ್ತುತ ಕಬಿನಿ ಜಲಾಶಯದಲ್ಲಿ ನೀರು ಶೇಖರಣೆಯಾಗಿದ್ದು, ಜು.28ರಿಂದ ನಾಲೆಗಳಲ್ಲಿ ನೀರು ಹರಿಯಲಿದ್ದು, ಉತ್ಸಾಹದಿಂದ ರೈತರು ಕೃಷಿಯಲ್ಲಿ ತೊಡಗಿದ್ದಾರೆ.
ಬಿತ್ತನೆ ಭತ್ತ ಖರೀದಿ: ಬಿತ್ತನೆ ಮಾಡಲು ಭತ್ತದ ಖರೀದಿಗಾಗಿ ಕೃಷಿ ಇಲಾಖೆ ಹಾಗೂ ಭತ್ತದ ವಿತರಣೆ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಂಡು ಬರುತ್ತಿದ್ದು, ಭತ್ತದ ಖರೀದಿಗಾಗಿ ಮುಗಿಬೀಳುತ್ತಿದ್ದಾರೆ. ಅಲ್ಲದೆ, ಭತ್ತದ ಖರೀದಿಗೆ ಅಗತ್ಯವಿರುವ ಅರ್ಜಿ, ಆರ್‌ಟಿಸಿಗಳನ್ನು ತಂದು ಕೃಷಿ ಅಧಿಕಾರಿಗಳಲ್ಲಿ ಸಹಿ ಮಾಡಿಸಲು ಸಾಲಾಗಿ ನಿಂತಿದ್ದ ದೃಶ್ಯ ಕಂಡು ಬರುತ್ತಿದೆ.
ತಾಲೂಕಿನಲ್ಲಿ 3500 ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತದೆ. ಕೃಷಿ ಇಲಾಖೆ ಮುಂಚಿತವಾಗಿಯೇ ರೈತರಿಗೆ ಅಗತ್ಯ ಭತ್ತದ ತಳಿಯನ್ನು ಸಂಗ್ರಹಿಸಿದ್ದು, ಯಾವುದೇ ತೊಂದರೆ ಯಾಗದಂತೆ ಕ್ರಮ ಕೈಗೊಂಡಿದೆ. ಕಬಿನಿಯಲ್ಲಿ ನೀರು ಹರಿಯಲು ಆರಂಭವಾಗುತ್ತಿದ್ದಂತೆಯೇ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ.
ರೈತರಿಗೆ ಬಿತ್ತನೆ ಭತ್ತ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದ್ದು, 25 ಕಿಲೋ ತೂಕದ ಐಆರ್64 ಭತ್ತಕ್ಕೆ ಪಜಾ, ಪಪಂಗೆ 425 ರೂ., ಇತರರಿಗೆ 525 ರೂ. ನಿಗದಿಗೊಳಿಸಲಾಗಿದೆ. ಜ್ಯೋತಿ ಭತ್ತಕ್ಕೆ 650 ರೂ. ಹಾಗೂ 750 ರೂ. ನಿಗದಿ ಮಾಡಲಾಗಿದೆ. ರೈತರಿಗೆ ತೊಂದರೆಯಾಗದಂತೆ ಭತ್ತದ ಬಿತ್ತನೆ ಬೀಜ ವಿತರಣೆಯಾಗುತ್ತಿದೆ.
-ವೆಂಕಟರಂಗಶೆಟ್ಟಿ, ಕೃಷಿ ಅಧಿಕಾರಿ