Advertisement

ಹೊಲಗಳತ್ತ ಮುಖ ಮಾಡಿದ ಅನ್ನದಾತರು

06:56 AM May 09, 2020 | Suhan S |

ಗದಗ: ಸತತ ನಾಲ್ಕೈದು ವರ್ಷ ಕಾಡಿದ ಬರ ಹಾಗೂ ಕಳೆದ ಹಿಂಗಾರಿನಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಜಿಲ್ಲೆಯ ರೈತರು ಕಂಗೆಟ್ಟಿದ್ದಾರೆ. ಇದರ ನಡುವೆ ಕೋವಿಡ್ ಭೀತಿಯಿಂದ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಈ ನಡುವೆ ಲಾಕ್‌ಡೌನ್‌ ಸಡಿಲಿಕೆಗೊಂಡಿದ್ದರಿಂದ ಗ್ರಾಮೀಣ ಭಾಗದಲ್ಲಿ ಈಗಾಗಲೇ ಕೃಷಿ ಚಟುವಟಿಗಳು ಗರಿಗೆದರಿವೆ.

Advertisement

ಕಳೆದ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ವರ್ಷಧಾರೆ ಅತಿವೃಷ್ಟಿ ಸೃಷ್ಟಿಯಾಗಿತ್ತು. ಜಿಲ್ಲೆಯ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿದು ನೆರೆ ಬಂದಿತ್ತು. ಹೀಗಾಗಿ ಬೆಳೆ ಕೈಗೆ ಬಾರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವುದರಿಂದಾಗಿ ಇಳೆ ತಂಪಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣಗೊಂಡಿದೆ. ಜಮೀನುಗಳನ್ನು ಬಿತ್ತನೆಗೆ ಸಿದ್ಧಗೊಳಿಸಿರುವ ರೈತರು ರೋಹಿಣಿ ನಕ್ಷತ್ರದಲ್ಲಿ ಸುರಿಯುವ ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ.

ಬಿತ್ತನೆ ಬೀಜ, ಗೊಬ್ಬರ ಸಂಗ್ರಹಕ್ಕೆ ಒತ್ತು: ಈ ಹಿಂದಿನ ವರ್ಷಗಳಲ್ಲಿ ಉಂಟಾದ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ನಿರೀಕ್ಷಿತ ಬಿತ್ತನೆ ಗುರಿ ಸಾಧಿಸಿಲ್ಲ. ಇದೀಗ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷಿ ಇಲಾಖೆಯೂ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸಿದ್ಧತೆ ನಡೆಸಿದೆ.

ಬಿತ್ತನೆ ಗುರಿ: 2020ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಒಟ್ಟು 2.80 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ. ಜಿಲ್ಲೆಯ ಗದಗ, ಮುಂಡರಗಿ, ರೋಣ, ನರಗುಂದ ಹಾಗೂ ಶಿರಹಟ್ಟಿ ಸೇರಿದಂತೆ ಒಟ್ಟು 34,300 ಹೆಕ್ಟೇರ್‌ ನೀರಾವರಿ ಹಾಗೂ 2.46 ಲಕ್ಷ ಹೆಕ್ಟೇರ್‌ ಖುಷ್ಕಿ ಪ್ರದೇಶವನ್ನು ಹೊಂದಿದೆ. 82 ಸಾವಿರ ಹೆಕ್ಟೇರ್‌ ಗೋವಿನಜೋಳ, 4,800 ಹೆಕ್ಟೇರ್‌ ಭತ್ತ, ಹೈಬ್ರಿಡ್‌ ಜೋಳ, ಸಜ್ಜೆ ಸೇರಿದಂತೆ 19,800 ಹೆಕ್ಟೇರ್‌ ನೀರಾವರಿ ಹಾಗೂ ಹೆಕ್ಟೇರ್‌ 72,30 ಖುಷ್ಕಿ ಪ್ರದೇಶದಲ್ಲಿ ತೃಣ ಧಾನ್ಯ ಬೆಳೆ ಬಿತ್ತನೆ ಗುರಿ ಹೊಂದಿದೆ. ಮುಂಗಾರಿನ ಪ್ರಮುಖ ಬೆಳೆಯಾಗಿರುವ ಹೆಸರು ಈ ಬಾರಿ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ಜೊತೆಗೆ 600 ಹೆಕ್ಟೇರ್‌ನಲ್ಲಿ ತೊಗರಿ, 300 ಹೆಕ್ಟೇರ್‌ ಅಲಸಂದಿ  ಹಾಗೂ ಹುರಳಿ, ಉದ್ದು, ಮಡಿಕೆ, ಅವರೆ ಸೇರಿದಂತೆ ಒಟ್ಟು 1,01,300 ಹೆಕ್ಟೇರ್‌ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆಯಾಗುವ ಸಾಧ್ಯತೆಯಿದೆ.

3,500 ನೀರಾವರಿ, 44 ಸಾವಿರ ಖುಶ್ಕಿ ಸೇರಿ ಒಟ್ಟು 48,200 ಹೆಕ್ಟೇರ್‌ನಲ್ಲಿ ಶೇಂಗಾ, ಸೂರ್ಯಕಾಂತಿ, ಎಳ್ಳು ಸೇರಿದಂತೆ ಇತರೆ ಎಣ್ಣೆಕಾಳು ಬೆಳೆ ಹಾಗೂ 11 ಸಾವಿರ ನೀರಾವರಿ, 28 ಸಾವಿರ ಖುಶ್ಕಿ ಸೇರಿದಂತೆ ಒಟ್ಟು 39 ಸಾವಿರ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳಾದ ಬಿಟಿ ಹತ್ತಿ, ಕಬ್ಬು ಬಿತ್ತನೆ ಗುರಿ ಹೊಂದಿದೆ.

Advertisement

27 ಸಾವಿರ ಕ್ವಿಂಟಲ್‌ ಬೀಜ ಅಗತ್ಯ: ವಿವಿಧ ಬೆಳೆಗಳ ಒಟ್ಟಾರೆ 27,092 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಇಲ್ಲಿನ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ 50 ಕ್ವಿಂಟಲ್‌ ಹೈಬ್ರಿಡ್‌ ಜೋಳ, 1200 ಕ್ವಿಂಟಲ್‌ ಹೆಸರು, 400 ಕ್ವಿಂಟಲ್‌ ತೊಗರಿ, 50 ಕ್ವಿಂಟಲ್‌ ಉದ್ದು ಮತ್ತು ಕರ್ನಾಟಕ ಸಹಕಾರ ಎಣ್ಣೆಬೀಜಡಿ ಬೆಳೆಗಾರರ ಒಕ್ಕೂಟದಲ್ಲಿ 1200 ಕ್ವಿಂಟಲ್‌ ಶೇಂಗಾ ಮತ್ತು ಖಾಸಗಿ ಮಾರಾಟಗಾರರಲ್ಲಿ 5 ಸಾವಿರ ಕ್ವಿಂಟಲ್‌ ಮೆಕ್ಕೆಜೋಳ, 100 ಕ್ವಿಂಟಲ್‌ ಸಜ್ಜೆ ಬೆಳಗಳ ಬಿತ್ತನೆ ಬೀಜ ದಾಸ್ತಾನು ಇದೆ. ಇನ್ನುಳಿದಂತೆ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಆಮದು ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

34,960 ಟನ್‌ ಗೊಬ್ಬರ: ಬಿತ್ತನೆ ಬೀಜದೊಂದಿಗೆ ಅಗತ್ಯ ರಸಗೊಬ್ಬರ ದಾಸ್ತಾನಿಗೂ ಇಲಾಖೆ ಸಿದ್ಧತೆ ನಡೆಸಿದೆ. ಯೂರಿಯಾ, ಡಿಎಪಿ, ಪೊಟ್ಯಾಶ್‌, ಕಾಂಪ್ಲೆಕ್ಸ್‌ ಗೊಬ್ಬರಕ್ಕೆ ಬೇಡಿಕೆ ಹೆಚ್ಚು. ಸದ್ಯ ಖಾಸಗಿ ಮಳಿಗೆಗಳಲ್ಲಿ 10,238.70, ಸಹಕಾರ ಸಂಘಗಳಲ್ಲಿ 2616 ಹಾಗೂ ಫೆಡರೇಷನ್‌ನಲ್ಲಿ 3746 ಟನ್‌ ರಸಗೊಬ್ಬರ ದಾಸ್ತಾನಿದೆ. ಮುಂಗಾರು ಹಂಗಾಮಿಗೆ ಒಟ್ಟಾರೆ 41,100 ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿದೆ. ಕಳೆದ ಎರಡು ವರ್ಷಗಳಿಂದ ರೈತರು ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳಿಲ್ಲ. ಹೀಗಾಗಿ ತಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗಿರುವ ಹಿಂಗಾರು ಹಂಗಾಮಿನ ಇನ್‌ಪುಟ್‌ ಸಬ್ಸಡಿಯಲ್ಲೇ ಬೀಜ, ಗೊಬ್ಬರ ಖರೀದಿಸಲು ಚಿಂತನೆ ನಡೆಸಿದ್ದಾರೆ.

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next