ಠಾಕೂರ್‌ಗಂಜ್, ಪಶ್ಚಿಮ ಬಂಗಾಲ : ‘ಕೃಷಿ ಸಾಲ ಮನ್ನಾ ಹೆಸರಿನಲ್ಲಿ ದೇಶದ ಎಲ್ಲ ರಾಜಕೀಯ ವಿರೋಧಿ ಪಕ್ಷಗಳು ರೈತರ ದಾರಿತಪ್ಪಿಸಿವೆ; ರೈತರನ್ನು ಮೋಸ ಮಾಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಉತ್ತರ 24 ಪರಗಣ ಜಿಲ್ಲೆಯ ಠಾಕೂರ್ ಗಂಜ್ ನಲ್ಲಿ ನಡೆದ ಬೃಹತ್ ಬಿಜೆಪಿ ರಾಲಿಯಲ್ಲಿ ನೆರೆದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಹೇಳಿದರು.
ಸಾಗರೋಪಾದಿಯಲ್ಲಿ ಸೇರಿದ ಜನಸಮೂಹದ ನಡುವೆ ಕಾಲ್‌ತುಳಿತದಂತಹ ಸನ್ನಿವೇಶ ಎದುರಾಗುತ್ತಿರುವುದನ್ನು ಕಂಡು ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು 14 ನಿಮಿಷಕ್ಕೇ ಮುಗಿಸಬೇಕಾಯಿತು.
‘ದೇಶದ ರಾಜಕೀಯ ವಿರೋಧಿ ನಾಯಕರು ಗ್ರಾಮೀಣ ಭಾರತದ ಅಭಿವೃದ್ಧಿಗೆ ಯಾವುದೇ ಮಹತ್ವ ನೀಡಿಲ್ಲ. ನವ ಭಾರತ ಈ ರೀತಿಯಲ್ಲಿ ಕಾರ್ಯವೆಸಗುವುದು ಅಸಾಧ್ಯ. ಅಂತೆಯೇ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಅಭ್ಯುದಯಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ’ ಎಂದು ಮೋದಿ ಹೇಳಿದರು.
‘ರೈತರ ಮೇಲೆ ಇನ್ನು ಮುಂದೆ ಯಾವುದೇ ರೀತಿಯ ಕೂಟ-ತೆರಿಗೆ ಇರುವುದಿಲ್ಲ; ಅಡೆತಡೆಗಳು ಇರುವುದಿಲ್ಲ; ಹೊಸ ಬಜೆಟ್ ಪ್ರಕಾರ ರೈತರು ಇನ್ನು ನೇರವಾಗಿ ವರ್ಷಕ್ಕೆ 6,000 ರೂ.
ಪಡೆಯಲಿದ್ದಾರೆ. ರೈತರು ಈ ಮೊತ್ತವನ್ನು ಕೃಷಿ ಖರ್ಚು ವೆಚ್ಚಕ್ಕೆ ಬಳಸಬಹುದಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
‘ರೈತರು ಮತ್ತು ಕಾರ್ಮಿಕರ ವರ್ಗದವರ ಸ್ಥಿತಿಗತಿ ಸುಧಾರಿಸುವುದಕ್ಕೆ ನನ್ನಸರಕಾರ ಪ್ರಾಮಾಣಿಕ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಮೋದಿ ಹೇಳಿದರು.
ಮೋದಿ ಅವರಿಂದು ಕೈಗಾರಿಕಾ ನಗರಿಯಾಗಿರುವ ದುರ್ಗಾಪುರದಲ್ಲಿ ಇನ್ನೊಂದು ರಾಲಿಯನ್ನು ಉದೇಶಿಸಿ ಮಾತನಾಡಲಿದ್ದಾರೆ.