ಸಿದ್ದಾಪುರ: ಅತಿವೃಷ್ಟಿ, ಅನಾವೃಷ್ಟಿ ಮುಂತಾಗಿ ಯಾವುದೇ ಸಮಸ್ಯೆಗಳಿಗೂ ರೈತರಷ್ಟು ನೇರಸ್ಪಂದನೆ ಯಾರಿಗೂ ಆಗುವುದಿಲ್ಲ. ಅಂಥ ಪ್ರತಿಕೂಲ ಸ್ಥಿತಿಗಳ ನಡುವೆಯೂ ಕೃಷಿಕರು ಆಹಾರ ಬೆಳಗಳ, ಇನ್ನಿತರ ಅಗತ್ಯ ಬೆಳೆಗಳನ್ನು ಬೆಳೆದು ದೇಶದಲ್ಲಿ ಆಹಾರದ ಕುರಿತು ಸ್ವಾವಲಂಬಿಗಳಾಗಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕು ಕೃಷಿ ಇಲಾಖೆ ಆಯೋಜಿಸಿದ ಕೃಷಿ ಪ್ರಶಸ್ತಿ ಹಾಗೂ ಪರಿಕರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಕರಿಗೆ ಸರಕಾರ ಬಡ್ಡಿರಹಿತ ಸಾಲ, ಬೆಳೆವಿಮೆ, ಸಬ್ಸಿಡಿಯಲ್ಲಿ ಉಪಕರಣ ಮುಂತಾಗಿ ದೊಡ್ಡಮಟ್ಟದಲ್ಲಿ ನೆರವು ನೀಡುತ್ತಿದೆ. ಕೇವಲ ಕೃಷಿ, ತೋಟಗಾರಿಕೆ ಇಲಾಖೆಗಳು ಮಾತ್ರವಲ್ಲದೇ ಇನ್ನುಳಿದ ಹಲವು ಇಲಾಖೆಗಳ ಮೂಲಕವೂ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಈ ತಾಲೂಕಿನ ರೈತರ ಕೊಡುಗೆ ದೊಡ್ಡದಿದೆ. ಕೆಲವು ರೈತರಲ್ಲಿ ಸಾಲ ಮಾಡುವ ಪ್ರವೃತ್ತಿ ಬೆಳೆದಿದೆ. ವಿನಾ ಕಾರಣ ಸಾಲ ಮಾಡುವುದನ್ನು ಬಿಡಿ. ಅದರ ಸುಳಿಯಲ್ಲಿ ಸಿಕ್ಕರೆ ಹೊರಗೆ ಬರುವುದು ಕಷ್ಟ. ಉತ್ತಮ ಸಾಧನೆ ಮಾಡಿದ ಕೃಷಿಕರು ಉಳಿದವರಿಗೂ ಮಾದರಿ. ಸಾವಯವ ವಿಧಾನದಲ್ಲಿ ಬೆಳೆದ ಕೃಷಿ ಬೆಳೆಯನ್ನು ಕಂಪನಿಗಳು ಖರೀದಿಸುತ್ತಿದ್ದು ಅದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಇಲಾಖೆಗಳ ಕಾರ್ಯನಿರ್ವಹಣೆ, ಸೌಲಭ್ಯಗಳ ಕೊಡುಗೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿ. ಸಾರ್ವಜನಿಕರಿಗೆ ಸಂಶಯ ಬರುವ ರೀತಿಯಲ್ಲಿ ನಿಮ್ಮ ವ್ಯವಸ್ಥೆ, ನಿರ್ವಹಣೆ ಇರಬಾರದು. ಸರಕಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಕೇವಲ ಜನಪ್ರತಿನಿಧಿಗಳಿಗೆ ಮಾತ್ರ ಅಲ್ಲ, ಅಧಿಕಾರಿಗಳಿಗೂ ಅನ್ವಯಿಸುತ್ತದೆ. ಸರಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಗಮನ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ ನಾಯ್ಕ, ಪಪಂ ಸದಸ್ಯರಾದ ಗುರುರಾಜ ಶಾನಭಾಗ, ಮಾರುತಿ ನಾಯ್ಕ, ನಂದನ ಬೋರ್ಕಾರ ಇದ್ದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಾ ಸ್ವಾಗತಿಸಿದರು. ಕೃಷಿ ಅಧಿಕಾರಿ ಪ್ರಶಾಂತ ನಿರೂಪಿಸಿದರು. ಅತ್ಯಧಿಕ ಭತ್ತ ಬೆಳೆದ ರೈತರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ರೈತ ಸಂಘಗಳಿಗೆ ಸುತ್ತು ನಿಧಿ, ಕೃಷಿ ಉಪಕರಣ ಹಾಗೂ ಟ್ರಾಕ್ಟ್ಯರ್ ವಿತರಿಸಲಾಯಿತು.