Advertisement

ಕೃಷಿಕರ ಕಂಕಣ ಭಾಗ್ಯ ಯೋಜನೆ ಜಾರಿಯಾಗಲಿ

01:31 PM May 26, 2022 | Team Udayavani |

ಸಂಕೇಶ್ವರ: ಅಂತರ್ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹಧನದಂತೆ ಯುವ ರೈತರ ಕೈ ಹಿಡಿಯುವ ಯುವತಿಯರಿಗೆ ಕನಿಷ್ಟ 5 ಲಕ್ಷ ಪ್ರೋತ್ಸಾಹಧನ ನೀಡುವ ಕೃಷಿಕರ ಕಂಕಣ ಭಾಗ್ಯ ಯೋಜನೆಯನ್ನು ಜಾತ್ಯತೀತವಾಗಿ ಆರಂಭಿಸಬೇಕೆಂದು ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದ್ದಾರೆ.

Advertisement

ಸಮೀಪದ ಹರಗಾಪೂರಗಡದ ಕುರಣ ತೋಟದಲ್ಲಿ ಮುಂಗಾರು ಚಟುವಟಿಕೆ ಹಾಗೂ ಕೃಷಿಕರ ಸಮಸ್ಯೆ ಆಲಿಸಿದ ಅವರು, ಇಂದಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಆದರೂ ಕೃಷಿಕ ಯುವಕರನ್ನು ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಿದ್ದು, ಈ ಕುರಿತು ರೈತ ಮುಖಂಡರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿ ನೇತೃತ್ವದ ನಿಯೋಗದ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಮದುವೆ ಸಲುವಾಗಿ ಹೆಚ್ಚಿನ ಯುವ ರೈತರು ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಲ್ಲಿ ನೌಕರಿ ಹಿಡಿಯುತ್ತಿದ್ದಾರೆ. ಯುವತಿಯ ಪೋಷಕರು ಸಹ ಕೃಷಿಕ ಯುವಕರಿಗೆ ಮಗಳನ್ನು ಕೊಡುತ್ತಿಲ್ಲ. ಇಂತಹ ವ್ಯವಸ್ಥೆಗಳ ಬಗೆಗೆ ಸಾಕಷ್ಟು ಜಾಗೃತಿ ಅವಶ್ಯವಾಗಿದೆ ಎಂದರು.

ರೈತ ಸಂತತಿ ಉಳಿದರೆ ಮಾತ್ರ ಭವಿಷ್ಯದ ಬೆಳವಣಿಗೆ ಸಾಧ್ಯ ಹೀಗಾಗಿ ವಿದ್ಯಾವಂತ ಯುವಕರು ಆಧುನಿಕ ಕೃಷಿಯಲ್ಲಿ ತೊಡಗಿಕೊಂಡು ಅನ್ನ ನೀಡುವ ಅನ್ನದಾತನ ಸಂಕುಲಕ್ಕೆ ಬೆಳಕು ಚೆಲ್ಲಬೇಕಾಗಿದೆ ಎಂದರು.

ವೈಜ್ಞಾನಿಕ ಕೃಷಿಯಿಂದ ದೂರ ಉಳಿದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಇಂದಿನ ಯುವ ಸಮುದಾಯವನ್ನು ಕೃಷಿಯಿಂದ ದೂರ ಉಳಿಯುಂತೆ ಮಾಡಿವೆ ಎಂದರು.

Advertisement

ಸಿರಿಧಾನ್ಯ ಬೆಳೆಗಳಿಗೆ ಒತ್ತು ನೀಡಿ: ಇಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ಸದೃಢವಾಗಿಸಿಕೊಳ್ಳ ಬಹುದಾಗಿದ್ದು, ರೈತರು ತಮ್ಮ ಮನೆ ಉಪಯೋಗಕ್ಕೆ ಬೇಕಾದಷ್ಟು ಸಿರಿಧಾನ್ಯ ಬೆಳೆದುಕೊಳ್ಳಬೇಕು. ಶ್ರೀಮಠದಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಬೀಜ ವಿತರಣೆ ಮಾಡಲಾಗುವುದು ಎಂದರು. ಹರಗಾಪೂರ, ಅಂಕಲೆ, ನಿಡಸೋಸಿ, ನಿಡಸೋಸಿವಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next