ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ್ದ ಅಲ್ಪಾವಧಿ ಬೆಳೆ ಸಾಲದ ಪೈಕಿ ರಾಜ್ಯ ಸರಕಾರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು ಬಿಜೆಪಿಯ ಹೋರಾಟದ ಫಲ ಎನ್ನುವ ಮೂಲಕ ಅದರ ಲಾಭ ಪಡೆಯಲು ಬಿಜೆಪಿ ಸಿದ್ಧತೆ ನಡೆಸಿದೆ. ಅಲ್ಲದೆ, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರಿಸಲು ತೀರ್ಮಾನಿಸಿದೆ. ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡಿದ ಸರಕಾರದ ನಿರ್ಧಾರ ಬಿಜೆಪಿ ಹೋರಾಟದ ಫಲ ಎಂದು ಹೇಳಿದ್ದಾರೆ. ಅಲ್ಲದೆ, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಎಲ್ಲ 10,376 ಕೋಟಿ ರೂ. ಸಾಲ ಮನ್ನಾ ಮಾಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಕಡೆ ಕೈತೋರಿಸುತ್ತಿದ್ದ ರಾಜ್ಯ ಸರಕಾರ ಸಾಲ ಮನ್ನಾ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಆದರೆ, ಬಿಜೆಪಿ ರಾಜ್ಯಾದ್ಯಂತ ಹೋರಾಟ ಮುಂದುವರಿಸಿದ್ದಲ್ಲದೆ, ವಿಧಾನ ಮಂಡಲದಲ್ಲೂ ಈ ಬಗ್ಗೆ ಸರಕಾರವನ್ನು ಒತ್ತಾಯಿಸಿತ್ತು. ಜತೆಗೆ ಸಾಲ ಮನ್ನಾ ನಿರ್ಧಾರ ಪ್ರಕಟಿಸದಿದ್ದಲ್ಲಿ ಜು. 7ರಿಂದ 9ರ ವರೆಗೆ ಬೆಂಗಳೂರಿನಲ್ಲಿ ಉಪವಾಸ ಮುಷ್ಕರ ಮತ್ತು ಜು. 10ರಂದು ರಾಜ್ಯಾದ್ಯಂತ 4ರಿಂದ 5 ಲಕ್ಷ ರೈತರನ್ನು ಸಂಘಟಿಸಿ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಇದಕ್ಕೆ ಮಣಿದ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ ಎಂದರು.
ಧರಣಿ ಮುಂದೂಡಿಕೆ: ರಾಜ್ಯ ಸರಕಾರ 50 ಸಾವಿರರೂ.ವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಿದ್ದರಿಂದ ಜು. 7ರಿಂದ 9ರವರೆಗೆ ಹಮ್ಮಿಕೊಂಡಿದ್ದ ಉಪವಾಸ ಮುಷ್ಕರ ಮತ್ತು ಜು. 10ರಂದು ನಡೆಸಲು ಉದ್ದೇಶಿಸಿದ್ದ 4ರಿಂದ 5 ಲಕ್ಷ ರೈತರನ್ನು ಸಂಘಟಿಸಿ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಆದರೆ, ಸಂಪೂರ್ಣ ಸಾಲ ಮನ್ನಾ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತಿತರರಿದ್ದರು.
ಕೇಂದ್ರದ ಮೇಲೆ ಒತ್ತಡ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾ ಮಾಡುವ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಸಾಲ ಮನ್ನಾದ ಅಗತ್ಯದ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಅದೇ ರೀತಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಹಿಂಗಾರು ಬರ ಪರಿಹಾರಕ್ಕೆ ಅನುದಾನವನ್ನು ತತ್‌ಕ್ಷಣ ಬಿಡುಗಡೆ ಮಾಡುವಂತೆ ಕೋರಲಾಗುವುದು. ಈ ಎರಡೂ ಉದ್ದೇಶಗಳಿಗಾಗಿ ಸಾಧ್ಯವಾದರೆ ಕೇಂದ್ರ ಸಚಿವರು ಮತ್ತು ರಾಜ್ಯದ ಸಂಸದರ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಲಾಗುವುದು ಎಂದು ಯಡಿಯೂರಪ್ಪ ಹೇಳಿದರು.