Advertisement

ರೈತರ ಜಮೀನು ಅಡಮಾನ ನೀತಿ ಕೈಬಿಡಲು ಒತ್ತಾಯ

09:05 PM May 04, 2019 | Lakshmi GovindaRaj |

ಮೈಸೂರು: ಸಹಕಾರ ಬ್ಯಾಂಕುಗಳಲ್ಲಿ ರೈತರ ಜಮೀನು ಅಡಮಾನ ನೀತಿ ಕೈಬಿಡಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ಮುಂಗಾರು ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆ ನಡೆಸಲು ಸಹಕಾರ ಬ್ಯಾಂಕುಗಳಲ್ಲಿ ಜಮೀನು ಅಡಮಾನ ಮಾಡಿ ನೋಂದಣಿ ಮಾಡಬೇಕೆಂಬ ನಿಯಮ ಜಾರಿಮಾಡಿರುವುದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

ನೋಂದಣಿ ಕಚೇರಿಯಲ್ಲಿ ಅಡಮಾನ ಮಾಡಿಸಲು ವಾರಗಟ್ಟಲೇ ಕೆಲಸ ಬಿಟ್ಟು ಕಚೇರಿಗೆ ಅಲೆಯಬೇಕಾಗಿದೆ. ಜೊತೆಗೆ ಸಾವಿರಾರು ರೂ. ಖರ್ಚು ಮಾಡಬೇಕಾಗಿದೆ. ಹೀಗಾಗಿ ಈ ನೀತಿಯನ್ನು ರದ್ದುಪಡಿಸಿ, ಹಳೆಯ ಪದ್ಧತಿಯಂತೆ ಪಹಣಿ ಹಾಗೂ ಇ.ಸಿ ಪಡೆದು ಸಾಲ ನೀಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದರು.

ಸರ್ಕಾರ ಸಾಲಮನ್ನಾ ಘೋಷಣೆ ಮಾಡಿ ರೈತರಿಂದ ದಾಖಲಾತಿಗಳನ್ನು ಪಡೆದಿದ್ದರೂ ಸಹ ಇಂತಹ ರೈತರ ಖಾತೆಗೆ ಕಬ್ಬಿನ ಹಣ, ಭತ್ತ ಖರೀದಿ ಹಣ ಹಾಗೂ ಸಹಾಯಧನ ಬಂದಾಗ ಬ್ಯಾಂಕುಗಳು ಈ ಹಣವನ್ನು ಕಡಿತಮಾಡಿಕೊಂಡು ಸಾಲನ್ನಾ ಆಗಿರುವ ಸಾಲಕ್ಕೆ ಮತ್ತೂಮ್ಮೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.

ರಾಜ್ಯದಲ್ಲಿ 2018-19ನೇ ಸಾಲಿನ ಕಬ್ಬಿನ ಎಸ್‌ಎಪಿ ದರವನ್ನು ಉಪ ಉತ್ಪನ್ನಗಳ ಲಾಭದಲ್ಲಿ ಹಂಚಿಕೆ ಮಾಡಬೇಕೆಂಬ ನಿಯಮದಂತೆ ಕೂಡಲೇ ಹೆಚ್ಚುವರಿ ಎಸ್‌ಎಪಿ ದರವನ್ನು ರೈತರಿಗೆ ಕೊಡಿಸಬೇಕು.1028-19ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ 4ಸಾವಿರ ಕೋಟಿ ಹಣ ಪಾವತಿಯಾಗಿಲ್ಲ.

Advertisement

ಈ ಹಣವನ್ನು ಕೂಡಲೇ ಕೊಡಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆ ಮಾಡಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಪಿರಿಯಾಪಟ್ಟಣ ತಾಲೂಕಿನ ಕರಡಿಲಕ್ಕನಕೆರೆ ಏತ ನೀರಾವರಿ ಯೋಜನೆಗೆ ರೈತರ ಭೂಮಿ ಸ್ವಾಧೀನಪಡಿಸಿಕೊಂಡು 12 ವರ್ಷ ಕಳೆದರೂ ರೈತರಿಗೆ ಭೂ ಪರಿಹಾರ ನೀಡಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾಧ್ಯಕ್ಷ ಸೋಮಶೇಖರ್‌,ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌,ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next