Advertisement

ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರೈತರ ಭೂ ಸ್ವಾಧೀನ

10:03 PM Jan 17, 2020 | Lakshmi GovindaRaj |

ಕೊಳ್ಳೇಗಾಲ: ಕಳೆದ 7 ವರ್ಷಗಳಿಂದ ತಾಲೂಕಿನ ಹರಳೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರೈತರು ಜಮೀನು ನೀಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಪೊಲೀಸ್‌ ಭದ್ರತೆಯಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು, ರಸ್ತೆಯ ಎರಡು ಬದಿಯಲ್ಲಿ ಗುಂಡಿ ತೆಗೆದು ಜಮೀನುಗಳನ್ನು ವಶಪಡಿಸಿಕೊಂಡಿದೆ.

Advertisement

ಬೆಳಂಬೆಳಗ್ಗೆ ಸುಮಾರು 4.30ರ ಸಮಯದಲ್ಲಿ ಜಿಲ್ಲಾಡಳಿತದಿಂದ ಅಧಿಕಾರಿಗಳು ಬಾರಿ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಬೈಪಾಸ್‌ ರಸ್ತೆಗೆ ಭೂಮಿ ನೀಡದೆ ಸತಾಯಿಸುತ್ತಿದ್ದ ರೈತರ ಜಮೀನನ್ನು ವಶಪಡಿಸಿಕೊಳ್ಳಲು, ಜೆಸಿಬಿ ಯಂತ್ರಗಳ ಮೂಲಕ ಸದ್ದು ಮಾಡಿ ರಸ್ತೆ ನಿರ್ಮಾಣಕ್ಕೆ ಅಡಚಣೆ ಉಂಟು ಮಾಡುವ ರೈತರನ್ನು ತಡೆಗಟ್ಟಲು ಪೊಲೀಸ್‌ ಬಿಗಿ ಕಾವಲು ಏರ್ಪಟ್ಟಿತ್ತು.

ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ: ಈ ಸಂದರ್ಭದಲ್ಲಿ ಜಮೀನಿನ ಮಾಲೀಕರಾದ ಸಿದ್ದಯ್ಯ ಅವರು, ನಾನು ಜಮೀನಿನಲ್ಲಿ ಭತ್ತ ಹಾಕಿದ್ದು, ಇನ್ನು 15 ದಿನಗಳ ಒಳಗಾಗಿ ಫ‌ಸಲು ಕೈ ಸೇರಲಿದೆ. ಅಲ್ಲಿಯವರೆಗೆ ಅವಕಾಶ ಕೊಡಬೇಕು. ಈಗಾಗಲೇ ಜಮೀನಿನಲ್ಲಿ ಭತ್ತ ಬೆಳೆಯಲು ಸಾಕಷ್ಟು ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದು, ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಕಣ್ಣೀರಿಟ್ಟು ಮನವಿ ಮಾಡಿದರು.

ಬೆಳೆ ನಷ್ಟಕ್ಕೆ ಪರಿಹಾರ ನೀಡಿ: ಸಂಪೂರ್ಣ ಭತ್ತವಾಗಲು 15 ದಿನಗಳ ಕಾಲಾವಕಾಶ ಬೇಕು. ಈಗ ಭತ್ತ ಹಾಲಿನಿಂದ ಕೂಡಿದ್ದು, ಈ ಭತ್ತ ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ಕಟಾವು ಮಾಡುವುದರಿಂದ ನನಗೆ ಅನ್ಯಾಯವೇ ಹೊರತು, ಬೇರೆ ಯಾರಿಗೂ ಅನ್ಯಾಯವಾಗುವುದಿಲ್ಲ. ನನಗೂ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ಇದೆ. ಆದರೆ, ಕಾಲಾವಕಾಶ ನೀಡದೆ ಈ ರೀತಿ ತರಾತುರಿಯಲ್ಲಿ ಬೆಳೆ ನಷ್ಟ ಉಂಟು ಮಾಡುತ್ತಿರುವುದರಿಂದ ಬೆಳೆ ನಷ್ಟಕ್ಕೆ ಪರಿಹಾರ ಮಂಜೂರು ಮಾಡಿಕೊಡಬೇಕು ಎಂದು ಅಧಿಕಾರಿಗಳ ಮುಂದೆ ದಂಬಾಲು ಬಿದ್ದರು.

ರೈತನ ಕಣ್ಣೀರಿಗೆ ಬೆಲೆ ನೀಡಲಿಲ್ಲ: ರೈತನ ಕಣ್ಣೀರಿಗೆ ಬೆಲೆ ನೀಡದ ಅಧಿಕಾರಿಗಳು, ಜೊತೆಯಲ್ಲಿಯೇ ಕರೆದುತಂದಿದ್ದ ಕೂಲಿ ಕಾರ್ಮಿಕರು ಹಾಗೂ ಭತ್ತದ ಕಟಾವು ಯಂತ್ರದಿಂದ ಎರಡು ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಭತ್ತದ ಬೆಳೆಯನ್ನು ಕತ್ತರಿಸುವ ಮೂಲಕ ಸುಮಾರು 8 ಕಿ.ಮೀ ವರೆಗೆ ರಸ್ತೆ ನಿರ್ಮಾಣ ಮಾಡಲು ಜಮೀನುಗಳನ್ನು ವಶಪಡಿಸಿಕೊಂಡರು.

Advertisement

2013ರಲ್ಲಿ ರೈತರ ಜಮೀನು ಖರೀದಿ: ಈ ವೇಳೆ ಸುದ್ದಿಗಾರರೊಂದಿಗೆ ಮೈಸೂರಿನ ಭೂಸ್ವಾಧೀನ ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌ ಮಾತನಾಡಿ, ಬೈಪಾಸ್‌ ರಸ್ತೆ ನಿರ್ಮಾಣ ಮಾಡಲು ಕಳೆದ 2013ರಲ್ಲಿ ಜಮೀನು ಖರೀದಿ ವೇಳೆ ಎಲ್ಲಾ ರೈತರು ಜಮೀನು ನೀಡಿದ್ದಾರೆ. ಈ ರೈತರ ಪೈಕಿ ಶಿವಮ್ಮ, ಸಣ್ಣಮ್ಮ, ಮಹದೇವ, ಸವಿತಾ, ಸುಂದ್ರಮ್ಮ, ಚಿಕ್ಕಮಾದಯ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಏಳು ವರ್ಷಗಳ ಬಳಿಕ ನ್ಯಾಯಾಲಯ ರಸ್ತೆ ನಿರ್ಮಾಣಕ್ಕೆ ತೀರ್ಪು ನೀಡಿತು ಎಂದರು.

ನ್ಯಾಯಾಲಯದಲ್ಲೇ ಅನುದಾನ ಪಡೆಯಿರಿ: ಬೈಪಾಸ್‌ ರಸ್ತೆ ನಿರ್ಮಾಣಕ್ಕೆ 181 ರೈತರಿಂದ ಜಮೀನು ಖರೀದಿ ಮಾಡಲಾಗಿದೆ. ಇದರ ಪೈಕಿ 6 ಜನರು ಜಮೀನು ನೀಡದೆ ನ್ಯಾಯಾಲಯದ ಮೊರೆ ಹೋಗಿದ್ದರು. ಆರು ಜನರ ಜಮೀನಿನ ಅನುದಾನವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಈಗ ನ್ಯಾಯಾಲಯವು ರಸ್ತೆ ನಿರ್ಮಾಣಕ್ಕೆ ಆದೇಶ ನೀಡಿದೆ. ಅನುದಾನವನ್ನು ನ್ಯಾಯಾಲಯದಲ್ಲೇ ರೈತರು ಪಡೆದುಕೊಳ್ಳುವ ಅವಕಾಶವಿದೆ ಎಂದು ಹೇಳಿದರು.

ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ: ಹೈಕೋರ್ಟ್‌ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯ ರಸ್ತೆ ನಿರ್ಮಾಣಕ್ಕೆ ತೀರ್ಪು ನೀಡಿದ್ದರ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 8 ಕಿ.ಮೀ ರಾಷ್ಟ್ರೀಯ ಹೆದ್ದಾರಿ 209 ಬೈಪಾಸ್‌ ರಸ್ತೆ ಶೀಘ್ರದಲ್ಲೇ ರಸ್ತೆ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ಜಮೀನುಗಳ ಮಧ್ಯ ರಸ್ತೆ ನಿರ್ಮಾಣ: ಬೈಪಾಸ್‌ ರಸ್ತೆ ಜಮೀನುಗಳ ಮಧ್ಯ ಭಾಗದಲ್ಲಿ ನಿರ್ಮಾಣವಾಗುವುದರಿಂದ ಅಕ್ಕಪಕ್ಕಗಳಲ್ಲಿರುವ ರೈತರ ಜಮೀನುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಎರಡು ರಸ್ತೆ ಬದಿಯಲ್ಲಿ ಅನೇಕ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಬಹುದು. ಇದರಿಂದ ಪಟ್ಟಣ ಅಭಿವೃದ್ಧಿಯಾಗಲಿದೆ. ಬೈಪಾಸ್‌ ರಸ್ತೆ ನಿರ್ಮಾಣದಿಂದ ಪಟ್ಟಣದಲ್ಲಿ ವಾಹನಗಳ ಸಂಚಾರ ಸುಗಮವಾಗುವುದರಿಂದ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಿದಂತೆ ಆಗುತ್ತದೆ. ಮತ್ತೆ ಪಟ್ಟಣ ಅಭಿವೃದ್ಧಿ ಆಗಲಿದೆ, ಇದಕ್ಕೆ ಪ್ರಯೊಬ್ಬ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಡಿವೈಎಸ್‌ಪಿ ಮೋಹನ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಇನ್ಸ್‌ಪೆಕ್ಟರ್‌ ರವಿ ನಾಯ್ಕ, ಎಸ್‌ಐಗಳಾದ ರಾಜೇಂದ್ರ, ಅಶೋಕ್‌, ವಿಶೇಷ ಭೂ ಸ್ವಾಧೀನಾಧಿಕಾರಿ ಕೆಂಪೇಗೌಡ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಭೂ ಸ್ವಾಧೀನ ಅಧಿಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಹಾಜರಿದ್ದರು.

ರೈತರಿಗೆ ಸೂಕ್ತ ಪರಿಹಾರ: ರಸ್ತೆ ನಿರ್ಮಾಣಕ್ಕೆ ಜಮೀನು ಬಿಟ್ಟು ಕೊಡುವಂತೆ ಜಿಲ್ಲಾಡಳಿತ ಮತ್ತು ತಹಶೀಲ್ದಾರ್‌, ಉಪ ವಿಭಾಗ ಅಧಿಕಾರಿಗಳು ಹಲವು ಬಾರಿ ನೋಟಿಸ್‌ ಜಾರಿ ಮಾಡಿದ್ದರು. ಅಲ್ಲದೆ, ಮೌಖಿಕವಾಗಿ ಮನವಿ ಮಾಡಲಾಗಿತ್ತು. ರಸ್ತೆ ಬರುವ ಜಮೀನುಗಳಲ್ಲಿ ಯಾವುದೇ ತರಹದ ಬೆಳೆ ಹಾಕಬಾರದು ಎಂದು ಹಲವು ಬಾರಿ ಸೂಚನೆ ನೀಡಲಾಗಿದೆ. ಅಧಿಕಾರಿಗಳ ಸೂಚನೆಯನ್ನು ನಿರ್ಲಕ್ಷ್ಯ ಮಾಡಿ, ಕೆಲವು ರೈತರು ಬೆಳೆಗಳನ್ನು ಬೆಳೆದಿದ್ದು, ಅವರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಮೈಸೂರಿನ ಭೂ ಸ್ವಾಧೀನ ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಹೈಕೋರ್ಟ್‌ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪಿನ ಅನ್ವಯ ಎಲ್ಲಾ ರೈತರಿಗೂ ಸೂಚನೆ ನೀಡಿ, ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಯಾವ ರೈತರಿಗೂ ಅನ್ಯಾಯವಾಗದಂತೆ ಭೂಮಿ ವಶ ಕಾರ್ಯ ನಡೆಯಲಿದೆ.
-ನಿಖಿತ ಎಂ.ಚಿನ್ನಸ್ವಾಮಿ, ಉಪ ವಿಭಾಗಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next