Advertisement

ಬಡಾವಣೆಗೆ ಭೂಮಿ ನೀಡಿದ ರೈತರ ಅನಿರ್ದಿಷ್ಟಾವಧಿ ಧರಣಿ

06:35 AM Mar 20, 2019 | |

ಕೆಂಗೇರಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡದೆ ಬಿಡಿಎ ವಂಚಿಸುತ್ತಾ ಬಂದಿರುವುದನ್ನು ಖಂಡಿಸಿ ಬಡಾವಣೇಗೆ ಭೂಮಿ ನೀಡಿದ ರೈತರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

Advertisement

ಸೂಲಿಕೆರೆ ಮತ್ತು ರಾಮೋಹಳ್ಳಿಯ ನಡುವಿನ ಅರ್ಚಕರ ಬಡಾವಣೆಯ ಬಳಿ ಸಭೆ ಸೇರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬಿಡಿಎ ನಡೆಸುತ್ತಿರುವ ಕಾಮಗಾರಿಗೆ ನಾಲ್ಕು ದಿನಗಳಿಂಧ ಅಡ್ಡಿಪಡಿಸಿರುವ ರೈತರು. ಮಂಗಳವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಪ್ರಾಧಿಕಾರದಲ್ಲಿ ಲಂಚಕೋರ ಅಧಿಕಾರಿಗಳೇ ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸಮಸ್ಯೆಗೆ ಕೂಡಲೆ ಸ್ಪಂದಿಸಿ ಕೂಡಲೇ ಪರಿಹಾರ ಬಿಡುಗಡೆ ಮಾಡದಿದ್ದರೆ, ಭೂಮಿ ನೀಡಿದ ರೈತರೆಲ್ಲಾ ಒಟ್ಟಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮನೆಯವರೆಗೂ ಪಾದಯಾತ್ರೆ ನಡೆಸಿ ಅವರ ಮನೆ ಮುಂದೆ ಧರಣಿ ಮುಂದವರಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಧರಣಿ ವೇಳೆ ಮಾತನಾಡಿದ ಕೆಂಪೇಗೌಡ ಬಡಾವಣೆ ರೈತರ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪ, ಯೋಜನೆಗೆ 2008ರಲ್ಲಿ ಪ್ರಥಮ ಅಂಕಿತ ಹಾಕಿದ್ದು, ರೈತರಿಗೆ 2011ರಲ್ಲಿ ಪರಿಹಾರ ನೀಡಬೇಕು ಎಂದು ಆದೇಶವಾಗಿತ್ತು. 2013ರಿಂದ ಬಿಡಿಎ ಅಧಿಕಾರಿಗಳು ಪರಿಹಾರ ನೀಡುವ ಪ್ರಕ್ರಿಯೆ ಆರಂಬಿಸಿದ್ದು, ಇದುವರೆಗೂ ಕೇವಲ ಶೇ.40 ರೈತರಿಗೆ ಪರಿಹಾರ ನೀಡಿದ್ದಾರೆ. ಉಳಿದ ಶೇ.60ರಷ್ಟು ರೈತರಿಗೆ ಪರಿಹಾರ ನೀಡದೆ ವಂಚಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ನಮ್ಮ ಭೂಮಿಯನ್ನು ಬಿಡಿಎಗೆ ನೀಡಿದ ರೈತರು ಇಂದು ಬೀದಿಗೆ ಬಂದಿದ್ದೇವೆ. ಒಪ್ಪಂದದಂತೆ ನಮ್ಮ ಪಾಲಿಗೆ ನೀಡಬೇಕಿರುವ ನಿವೇಶನವನ್ನೂ ಇದುವರೆಗೆ ಪ್ರಾಧಿಕಾರ ನೀಡಿಲ್ಲ. ನ್ಯಾಯ ಕೇಳಲು ಹೋದರೆ ಪ್ರತಿ ಹೆಜ್ಜೆಗೂ ಲಂಚ ಕೇಳುವ ಮೂಲಕ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸರ್ವೇ ನಂ 45/1ಎ ರಲ್ಲಿ 30*40 ಅಳತೆಯ ನಿವೇಶನವನ್ನು ಹಳೇಬೈರೋಹಳ್ಳಿಯ ರೈತನಿಗೆ ಬಿಡಿಎ ನೋಂದಣಿ ಮಾಡಿಕೊಟ್ಟಿದೆ. ಇದೇ ವೇಳೆ ಸದರಿ ನಿವೇಶನವನ್ನು ಮತ್ತೂಬ್ಬ ಖಾಸಗಿ ವ್ಯಕ್ತಿಗೆ ನೋಂದಣಿ ಮಾಡಿಕೊಡಲಾಗಿದೆ. ಅದೇ ರೀತಿ ಸರ್ವೇ ನಂ 156/1ರಲ್ಲಿನ ನಿವೇಶನವನ್ನು ಕೂಡ 75 ವರ್ಷದ ಕೆ.ವಿ.ಜಯಕೃಷ್ಣ ಎಂಬ ರೈತ ಹಾಗೂ ಖಾಸಗಿ ವ್ಯಕ್ತಿಯೊಬ್ಬರಿಗೆ ನೋಂದಣಿ ಮಾಡಿಕೊಡಲಾಗಿದೆ.

ಈ ಅವ್ಯವಹಾರದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಈ ಅವ್ಯವಹಾರದಲ್ಲಿ ಉಪಕಾರ್ಯದರ್ಶಿ ಕೈವಾಡವಿದೆ ಎಂದು ನೇರ ಆರೋಪ ಮಾಡಿದರು. ಕೆಂಗೇರಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರೇಣುಕಪ್ಪ, ರಾಮೋಹಳ್ಳಿ ಪಂಚಾಯಿತಿ ಉಪಾಧ್ಯಕ್ಷ ಮಹೇಶ, ಮಾಜಿ ಉಪಾಧ್ಯಕ್ಷ ಪ್ರಭು, ಸದಸ್ಯರಾದ ಚಂದ್ರಪ್ಪ, ಚಲ್ಲಘಟ್ಟ ಮಂಜುನಾಥ, ಮುಖಂಡರಾದ ರಾಮಣ್ಣ, ರವಿ ರಬ್ಬಣ್ಣ, ನಾಗರಾಜ್‌, ಅಂಜನಕುಮಾರ್‌, ಸಿದ್ದಲಿಂಗಪ್ಪ, ವೆಂಕಟರಮಣ ಸೇರಿ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next