Advertisement
ಕೇಂದ್ರ ಸರ್ಕಾರದ ಯೋಜನೆ ಮತ್ತು ಸಾಂಖೀಕ ಇಲಾಖೆಯ ಮಾಹಿತಿ ಪ್ರಕಾರ 2015-16 ರಿಂದ 2021-22 ರ ವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯ ಆಧಾರದಲ್ಲಿ ರಾಜ್ಯಗಳ ಪ್ರಗತಿ ಪಟ್ಟಿ ಸಿದ್ದಪಡಿಸಲಾಗಿದ್ದು, ಕರ್ನಾಟಕ ಶೇ 50 ರಷ್ಟು ಪ್ರಗತಿ ಸಾಧಿಸಿ ನಂಬರ್ ಒನ್ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಶೇ 48 ರಷ್ಟು ಪ್ರಗತಿ ಸಾಧಿಸಿರುವ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಶೇ 47 ಸಾಧನೆ ಮಾಡಿರುವ ಓಡಿಸ್ಸಾ ಮತ್ತು ತೆಲಂಗಾಣ ಮೂರನೇ ಸ್ಥಾನದಲ್ಲಿವೆ. ಕೊನೆಯ ಸ್ಥಾನದಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ್ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಿವೆ.
Related Articles
Advertisement
ರೈತರಿಗೆ ಪ್ರಮುಖವಾಗಿ ಆದಾಯ ಹೆಚ್ಚಳವಾಗದಿರಲು ಹಲವಾರು ಕಾರಣಗಳಿವೆ. ರಾಜ್ಯದಲ್ಲಿ ಶೇ 70 ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಅವರಲ್ಲಿ ಹೆಚ್ಚಿನ ರೈತರು ಒಣ ಬೇಸಾಯವನ್ನು ಅವಲಂಬಿಸಿದ್ದಾರೆ. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಸಿಗದಿರುವುದು, ಸಕಾಲಕ್ಕೆ ಮಳೆಯಾಗದೇ ನೀರಿನ ಕೊರತೆಯಿಂದ ಬೆಳೆ ಕುಂಟಿತಗೊಳ್ಳುವುದು. ಕೃಷಿ ಉತ್ಪನ್ನಗಳಿಗೆ ಸರಿಯಾದ ಸಮಯದಲ್ಲಿ ಮಾರಾಟ ಮಾಡಲು ಉತ್ತಮ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ಸಾಂಪ್ರದಾಯಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವುದು, ಏಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ ರೈತರು ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಕೃಷಿ ಆದಾಯ ಹೆಚ್ಚಳಕ್ಕೆ ಕಾರಣ:
ಶ್ರಮ ವಹಿಸಿ ದುಡಿದರೂ ರೈತರ ಆದಾಯ ಹೆಚ್ಚಳವಾಗದಿರುವುದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆದಾಯ ಹೆಚ್ಚಳಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುತ್ತಿವೆ. ಪ್ರಮುಖವಾಗಿ ರೈತರಿಗೆ ಅಗತ್ಯವಿದ್ದಾಗ ಬಿತ್ತನೇ ಬೀಜ ಖರೀದಿಸಲು ಹಾಗೂ ರಸಗೊಬ್ಬರ ಖರೀದಿಸಲು ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿ ಮೂರು ಕಂತುಗಳಲ್ಲಿ ಆರು ಸಾವಿರ ರೂ.ಗಳು, ಜೊತೆಗೆ ರಾಜ್ಯ ಸರ್ಕಾರದಿಂದಲೂ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ.
ಮಿತವ್ಯಯದಲ್ಲಿ ನೀರಿನ ಬಳಕೆ ಮಾಡಿಕೊಳ್ಳಲು ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ರೈತರು ವರ್ಷದಲ್ಲಿ ಒಂದೇ ಬೆಳೆ ಬೆಳೆಯುವ ಬದಲು ಎರಡು ಬೆಳೆ ಬೆಳೆಯಲು ಪ್ರೋತ್ಸಾಹ ನೀಡಿರುವುದು, ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೇರೇಪಣೆ ನೀಡುವುದು, ರೈತರು ಕೃಷಿಯಲ್ಲಿ ಯಂತ್ರೋಪಕರಣ ಮತ್ತು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಕೆ ಮಾಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರೂ ತಮ್ಮ ಹೊಲಗಳಲ್ಲಿ ಬಾಡಿಗೆ ರೂಪದಲ್ಲಿ ಯಂತ್ರೋಪಕರಣ ಪಡೆದು ಕೃಷಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಫ್ಪಿಒ ಮೂಲಕ ಮಾರುಕಟ್ಟೆ:
ರೈತರ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಮಾರುಕಟ್ಟೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ದೊರೆಯದೇ ನಿರಂತರ ನಷ್ಟ ಅನುಭವಿಸುತ್ತಿದ್ದು, ತಮ್ಮ ಅಗತ್ಯಕ್ಕೆ ತಕ್ಕಂತೆ ತಾವು ಬೆಳೆದ ಉತ್ತನ್ನಗಳನ್ನು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುವುದರಿಂದ ನಷ್ಟ ಅನುಭವಿಸುತ್ತಿರುವುದು ನಿರಂತರವಾಗಿದೆ. ಇದು ರೈತರ ಆದಾಯ ಕಡಿಮೆಯಾಗಲು ಪ್ರಮುಖ ಕಾರಣವಾಗಿದ್ದು, ಅದನ್ನು ತಪ್ಪಿಸಲು ಕೇಂದ್ರ ಸರ್ಕಾರದ ರೈತರದ್ದೇ ಎಫ್ಪಿಒ (ಫಾರ್ಮರ್ಸ್ ಪೊಡ್ನೂಸರ್ ಸಂಸ್ಥೆ) ತೆರೆಯುವ ಮೂಲಕ ತಮ್ಮ ಉತ್ಪನ್ನಗಳನ್ನು ಸಂಸ್ಕೃರಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.
ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಕಮಿಷನರೇಟ್:
ರೈತರು ಕೃಷಿಯೊಂದಿಗೆ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆಯನ್ನು ಕೈಗೊಳ್ಳಲರು ರಾಜ್ಯ ಸರ್ಕಾರ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ ಮಾಡಿದ್ದು, ಆ ಮೂಲಕ ರೈತರು ಉಪ ಕಸುಬು ಮಾಡಲು ವಿವಿಧ ಮೂಲಗಳಿಂದ ಸಾಲ ಹಾಗೂ ಪ್ರೋತ್ಸಾಹ ಧನ ನೀಡುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ.
ಆದಾಯ ಹೆಚ್ಚಳಕ್ಕೆ ಕಾರಣವಾದ ಪ್ರಮುಖ ಅಂಶಗಳು :
- ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ
- ಪರ್ಯಾಯ ಹಾಗೂ ಮಿಶ್ರ ಬೆಳೆಗೆ ಪ್ರೋತ್ಸಾಹ
- ಹನಿ ಹಾಗೂ ತುಂತುರು ನೀರಾವರಿಗೆ ಆದ್ಯತೆ
- ಎಫ್ಪಿಒ (ಫಾರ್ಮರ್ಸ್ ಪ್ರೊಡ್ನೂಸರ್ಸ್ ಸಂಸ್ಥೆ ) ಸ್ಥಾಪನೆ
- ಉಪ ಕಸುಬು ಕೈಗೊಳ್ಳಲು ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ