ಗುಳೇದಗುಡ್ಡ: ಭಾರಿ ಮಳೆ ರೈತರಿಗೆ ಆಘಾತ ನೀಡಿದ್ದು, ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ರಾಶಿಗೂಮುನ್ನವೇ ಮೊಳಕೆ ಒಡೆಯುತ್ತಿದೆ. ಗುಳೇದಗುಡ್ಡ ತಾಲೂಕಿನ ಅನೇಕಗ್ರಾಮಗಳಲ್ಲಿ ರಾಶಿಗೆ ಬಂದಿದ್ದ ಸಜ್ಜೆ ಹೊಲದಲ್ಲಿಯೇ ಮೊಳಕೆ ಒಡೆಯುತ್ತಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ರೈತರು ಸಜ್ಜೆ, ಈರುಳ್ಳಿ ಬೆಳೆ ಹಾನಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಭಾರಿ ಮಳೆಯಿಂದ ರಾಶಿ ಹಂತಕ್ಕೆ ಬಂದಿದ್ದ ಸಜ್ಜೆ, ಈರುಳ್ಳಿ ಹೊಲದಲ್ಲಿ ಕೊಳೆಯುತ್ತಿದೆ. ಅಷ್ಟೇ ಅಲ್ಲದೇ ಮೊಳಕೆ ಒಡೆಯುತ್ತಿದ್ದು, ಸಜ್ಜೆ ಕಟಾವು ಮಾಡಿ, ಹೊಲದಲ್ಲಿ ಕೂಡಿ ಹಾಕಿರುವ ಸಜ್ಜೆ ರಾಶಿಯು ಹಾಳಾಗುವಸಂಭವ ಎದುರಾಗಿದೆ. ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ 1170 ಹೆಕ್ಟೇರ್ ಪ್ರದೇಶ ಹಾನಿ: ಪ್ರತಿ ವರ್ಷ ಈರುಳ್ಳಿ ಬೆಳೆದ ರೈತ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿರಲಿಲ್ಲ. ಈ ಬಾರಿ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದ್ದು, ಆಗಸ್ಟ್‌ನಿಂದ ಸೆಪ್ಟಂಬರ್ ನಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳೆದ 488 ಹೆಕ್ಟೇರ್ ಈರುಳ್ಳಿ, 241 ಹೆಕ್ಟೇರ್ ಸಜ್ಜೆ, 168 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಸೂರ್ಯಕಾಂತಿ, 59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೈಬ್ರೀಡ್ ಜೋಳ, 10 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, 29 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಇನ್ನಿತರ ಬೆಳೆಗಳು ಸೇರಿದಂತೆ 1170 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಸೆಪ್ಟೆಂಬರ್ ಕೊನೆ ವಾರದಲ್ಲಿ 850ಹೆಕ್ಟೇರ್ ಹಾನಿ: ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ 850 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಬೆಳೆದ ಹತ್ತಿ, ಇನ್ನಿತರ ಬೆಳೆಗಳು ಹಾನಿಯಾಗಿವೆ. ಈ ಅವಧಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿಯೇ ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳು ಮೊಳಕೆ ಒಡೆಯುತ್ತಿವೆ.
ಆಗಸ್ಟ್‌ನಿಂದ ಸೆಪ್ಟೆಂಬರ್‌ನಲ್ಲಿ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಬೆಳೆದ ಹತ್ತಿ, ಇನ್ನಿತರ ಬೆಳೆಗಳು 1170 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ 850 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಬೆಳೆದ ಹತ್ತಿ, ಇನ್ನಿತರಬೆಳೆಗಳು ಹಾನಿಯಾಗಿವೆ. ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದೇವೆ. ತೋಟಗಾರಿಕೆ,ಕಂದಾಯ, ಕೃಷಿ ರೇಷ್ಮೆ ಇಲಾಖೆಗಳಿಂದ ತಂಡ ರಚಿಸಿ ಸರ್ವೇ ಮಾಡುತ್ತಿದ್ದು, ಶೀಘ್ರ ತಾಲೂಕಿನಲ್ಲಿ ಒಟ್ಟು ಹಾನಿಯಾದ ನಿಖರ ವರದಿ ಸಿಗಲಿದೆ.
-ಆನಂದ ಗೌಡರ, ಕೃಷಿ ಅಧಿಕಾರಿಗಳು, ಗುಳೇದಗುಡ್ಡ
ಎರಡು ಎಕರೆಯಲ್ಲಿ ಸಜ್ಜೆ ಬೆಳೆದಿದ್ದು, ಇನ್ನೇನು ಕಟಾವು ಮಾಡಬೇಕಿತ್ತು. ಅಷ್ಟರಲ್ಲಿ ನಾಲ್ಕು ದಿನಗಳಿಂದ ಭಾರಿ ಮಳೆ ಸುರಿದಿದ್ದರಿಂದ ಎಲ್ಲವೂ ಹಾಳಾಗಿದೆ. ರಾಶಿಗೆ ಬಂದಿದ್ದ ಸಜ್ಜೆಯನ್ನು ಗೂಡು ಕಟ್ಟಲಾಗಿತ್ತು,ಕೆಲವೊಂದಿಷ್ಟು ಹೊಲದಲ್ಲಿಯೆ ಬಿಡಲಾಗಿತ್ತು. ಈಗ ಎಲ್ಲವು ಮೊಳಕೆ ಒಡೆಯುತ್ತಿದೆ. ಇದರಿಂದ ನಮಗೆ ದಿಕ್ಕೆ ತೋಚದಂತಾಗಿದೆ.
– ಬಸವ್ವ ಟೀಕಪ್ಪ ಮೇದಾರ, ಕೋಟೆಕಲ್
ಮೂರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಭಾರಿ ಮಳೆಯಿಂದ ಹಾನಿಯಾಗಿ ಹೊಲದಲಿಯೇ ಕೊಳೆತು ಹೋಗಿದೆ. ಬಿತ್ತನೆಗೆ ಹಾಕಿದ್ದ ಬಂಡವಾಳವು ಸಹ ಬರಲಿಲ್ಲ. ಮುಂದೆ ಬೇರೆ ಬೆಳೆ ಬೆಳೆಯಬೇಕೆಂದರೆ ಹಣವು ಇಲ್ಲ. ಸರಕಾರ ಹಾನಿಗೊಳಗಾಗಿರುವ ಎಲ್ಲ ರೈತರಿಗೆ ವಿಶೇಷ ಪರಿಹಾರ ಕೊಡಬೇಕು.
– ಪ್ರಕಾಶ ಗೌಡರ, ಆಸಂಗಿ ರೈತ
-ಮಲ್ಲಿಕಾರ್ಜುನ ಕಲಕೇರಿ