ಯಾದಗಿರಿ: ಜಿಲ್ಲೆಯ ತೀವ್ರ ನೆರೆ ಮತ್ತು ಪ್ರವಾಹದಿಂದ ತತ್ತರಿಸಿರುವ ರೈತಾಪಿ ವರ್ಗಅಲ್ಪಸ್ಪಲ್ಪ ಕೈಗೆ ಬಂದ ಹತ್ತಿ ಬೆಳೆಯನ್ನು ಮಾರಾಟ ಮಾಡಲು ಮುಂದಾಗಿದ್ದು,ಈವರೆಗೆ ಹತ್ತಿ ಖರೀದಿ ಕೇಂದ್ರಗಳು ಆರಂಭಗೊಳ್ಳದಿರುವುದು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1.52 ಲಕ್ಷ ಹೆಕ್ಟೇರ್ ಹತ್ತಿ ಬಿತ್ತನೆಯಾಗಿದ್ದು, ಪ್ರತಿ ಹೆಕ್ಟೇರ್‌ಗೆ ಹತ್ತಿ ಇಳುವರಿ 6ರಿಂದ 7 ಕ್ವಿಂಟಲ್ ಬರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಯಾದಗಿರಿ, ಶಹಾಪುರ ಹಾಗೂ ವಡಗೇರಾ ತಾಲೂಕು ವ್ಯಾಪ್ತಿಯಲ್ಲಿ ಹತ್ತಿ ಕಟಾವು ಕಾರ್ಯ ಆರಂಭಗೊಂಡಿದೆ. ಜಿಲ್ಲಾಡಳಿತ ಕಳೆದ ವಾರವಷ್ಟೇ ಹತ್ತಿ ಖರೀದಿ ಕೇಂದ್ರ ಆರಂಭಕ್ಕೆ ಸಭೆ ನಡೆಸಿ ತಯಾರಿ ಮಾಡಿಕೊಳ್ಳುತ್ತಿದೆ ಹೊರತು ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರು ತಮ್ಮ ಬೆಳೆಯನ್ನು ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ತೆರೆದಿರುವ ಅನಧಿಕೃತ ಮಾರಾಟಗಾರರಿಗೆ ಅನಿವಾರ್ಯವಾಗಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ಬೆಂಬಲ ಬೆಲೆಗಿಂತ ಕಡಿಮೆ ಮೊತ್ತದಲ್ಲಿ ರೈತರಿಂದ ಬೇಕಾಬಿಟ್ಟಿ 4500 ಸಾವಿರದಿಂದ 4700 ರೂಪಾಯಿಯಂತೆ ದಲ್ಲಾಳಿಗಳು ಖರೀದಿಸುತ್ತಿದ್ದು, ಅದರಲ್ಲಿಯೂ ಕ್ವಿಂಟಲ್‌ಗೆ ಕೆಲ ಕೆಜಿಯಷ್ಟು ಹಮಾಲರು ಇತರರು ತೆಗೆಯುವುದುಇನ್ನಷ್ಟು ನಷ್ಟವನ್ನುಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 5 ಹತ್ತಿ ಖರೀದಿ ಕೇಂದ್ರಗಳನ್ನು ತೆರೆದು 4783 ರೈತರಿಂದ 242235 ಲಕ್ಷ ಕ್ವಿಂಟಲ್ ಹತ್ತಿಯನ್ನು ಪ್ರತಿ ಕ್ವಿಂಟಲ್‌ಗೆ 5550 ರೂ. ರಂತೆ ಖರೀದಿಸಲಾಗಿತ್ತು. ರೈತರು ಹತ್ತಿ ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದರೂ ಇನ್ನೂ ಖರೀದಿ ಕೇಂದ್ರಗಳು ಆರಂಭವಾಗದಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.
ಜಿಲ್ಲಾಡಳಿತ ತ್ವರಿತವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಕ್ರಮವಹಿಸಬೇಕು ಎಂದು ರೈತ ಮುಖಂಡ ಚನ್ನಾರೆಡ್ಡಿ ಪಾಟೀಲ್ ಆಗ್ರಹಿಸಿದ್ದಾರೆ.
ಖರೀದಿ ಆರಂಭದ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖರೀದಿಗೆ ಆದೇಶ ಬಂದ ನಂತರ ಹತ್ತಿ ಖರೀದಿ ಆರಂಭಿಸಲಾಗುವುದು.
-ಭೀಮರಾಯ ಕಲ್ಲೂರ,ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ
ಜಿಲ್ಲೆಯಲ್ಲಿ ಪ್ರವಾಹದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ರೈತರಿಗೆ ಸಮರ್ಪಕ ಬೆಲೆ ದೊರೆಯಲು ತ್ವರಿತಗತಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಿತ್ತು. ಈಗಾಗಲೇ ರೈತರು ಹೊರಗಡೆ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಬೆಲೆಯೂ ಸಿಗದೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
-ಬಸರೆಡ್ಡಿಗೌಡ ಮಾಲಿ ಪಾಟೀಲ್ ಅನಪುರ, ಜಿಪಂ ಸದಸ್ಯ
-ಅನೀಲ ಬಸೂದೆ