721 ದಿನಗಳಿಂದ ಹಗಲು ರಾತ್ರಿ ಧರಣಿ ಹಮ್ಮಿಕೊಂಡಿದ್ದರೂ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಹಂಗನಳ್ಳಿ ಹಾಗೂ ನೃಪತುಂಗ ಗ್ರಾಮಗಳ ರೈತರು ಜುಲೈ 10ರಂದು ಸೇಡಂದಿಂದ ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ಚಳವಳಿಗೆ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಶಾಂತಿಯುತವಾಗಿ ಪ್ರತಿಭಟನೆ ಆರಂಭಿಸಿದರೂ ರಾಜಶ್ರೀ ಸಿಮೆಂಟ್ ಕಾರ್ಖಾನೆ ಭೂ ಪರಿಹಾರ ಹೆಚ್ಚಿಸದೇ ನಿಷ್ಕಾಳಜಿ ತೋರಿಸಿದೆ. ಸುಮಾರು ಎಂಟು ಕಾರ್ಖಾನೆಗಳಿದ್ದರೂ ರೈತರ ಹಿತಾಸಕ್ತಿ ಕಡೆಗಣಿಸಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.ರಾಜಶ್ರೀ ಸಿಮೆಂಟ್ ಕಂಪನಿಯವರು ಪ್ರತಿ ಎಕರೆಗೆ ಕೇವಲ 3.5 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ. ಇದು ಹಿಂದಿನ ಜಿಲ್ಲಾಧಿಕಾರಿ ವಿಶಾಲ ಅವರಿದ್ದಾಗ ಆಗಿರುವ ದೊಡ್ಡ ಅನ್ಯಾಯವಾಗಿದೆ. ಒಪ್ಪಂದದಂತೆ 8 ಲಕ್ಷ ರೂ.ಗಳಿಗೂ ಅ ಧಿಕ
ಪರಿಹಾರ ನೀಡಬೇಕೆಂದು ಒತ್ತಾಯಿಸಿ ಧರಣಿ ಹಮ್ಮಿಕೊಂಡು 721 ದಿನಗಳು ಕಳೆದರೂ ಜಿಲ್ಲೆಯ ರಾಜಕಾರಣಿಗಳು ಕಾಳಜಿ ತೋರಿಸುತ್ತಿಲ್ಲ, ಸರಕಾರವೂ ಮೌನವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ. ದಿವಾಕರ್, ಅಖೀಲ ಭಾರತ ಕಿಸಾನ್‌ಸಭಾ ರಾಜ್ಯ ಉಪಾಧ್ಯಕ್ಷ ಮೌಲಾ ಮುಲ್ಲಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ರಾಜ್ಯ
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಅಂಬರೀಶಗೌಡ ಬಳಬಟ್ಟಿ, ಪಾಂಡುರಂಗ ಮಾವಿನಕರ್, ಅಶೋಕ ಮ್ಯಾಗೇರಿ ಹಾಜರಿದ್ದರು. ರೈತರ ಸಾಲಮುಕ್ತಿಗೆ ಆಗ್ರಹಿಸಿ 10ರಂದು ಸಮಾವೇಶ
ಕಲಬುರಗಿ: ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಜುಲೈ 10ರಂದು ರೈತ, ಕೃಷಿ ಕಾರ್ಮಿಕರನ್ನು ಸಾಲ ಮುಕ್ತರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ
ಸಂಘಟನೆ, ಅಖೀಲ ಭಾರತ ಕಿಸಾನ್ ಸಭಾ, ಪ್ರಾಂತ ಕೃಷಿ ಕೂಲಿಕಾರರ ಸಂಘ ಮುಂತಾದ 14 ರೈತ ಮತ್ತು ದಲಿತಪರ ಸಂಘಟನೆಗಳು ಭಾಗವಹಿಸಲಿವೆ ಎಂದರು.
Related Articles
Advertisement
ಈಗಾಗಲೇ ರಾಜ್ಯ ಸರ್ಕಾರವು 50,000ರೂ. ವರೆಗಿನ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದು, ಷರತ್ತುಗಳನ್ನು ಹಾಕಲಾಗಿದೆ. ಇದರಿಂದಯಾವುದೇ ಉಪಯೋಗ ಆಗುವುದಿಲ್ಲ. ಕೂಡಲೇ ಷರತ್ತುಗಳನ್ನು ತೆಗೆದುಹಾಕಿ, ಉಳಿದ 2578 ಕೋಟಿ ರೂ.ಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಈಗಾಗಲೇ ಬಂಡವಾಳಗಾರರಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಸುಮಾರು 12 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ವಿನಾಯಿತಿ ಹಾಗೂ ಸಾಲ ಮನ್ನಾ ಮಾಡಿದೆ. ಆದಾಗ್ಯೂ, ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಖಂಡನೀಯ. ಕೂಡಲೇ ರೈತ ವಿರೋಧಿ ನೀತಿಯನ್ನು ಕೇಂದ್ರ ಕೈಬಿಟ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಸೂಕ್ತ ಬೆಂಬಲ ಬೆಲೆಗಾಗಿ ಡಾ| ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, ಉತ್ಪಾದನಾ ವೆಚ್ಚದಜೊತೆಗೆ ಶೇಕಡಾ 50ರಷ್ಟು ಲಾಭ ಸೇರಿಸಿ ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕೆಂಬ
ಶಿಫಾರಸ್ಸು ಜಾರಿಗೆ ತರಬೇಕೆಂದರು. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ 75ನೇ ಸ್ವಾತಂತ್ರೊತ್ಸವದಲ್ಲಿ 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ ಘೋಷಿಸಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯವರು ಡಾ| ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆಯನ್ನು ನೀಡಿದ್ದರು. ಅ ಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಮರೆತಿದ್ದಾರೆ. ಕೂಡಲೇ ಕನಿಷ್ಠ ಬೆಂಬಲ ಬೆಲೆ ಸೂತ್ರಕ್ಕೆ ಶಾಸನ ಬದ್ದ ಸ್ವರೂಪ ನೀಡಬೇಕೆಂದು ಒತ್ತಾಯಿಸಿದರು. ಬೆಳೆ ನಷ್ಟಕ್ಕೆ ಗುರಿಯಾಗಿರುವ ಪ್ರತಿ ಕೃಷಿಕನಿಗೂ ಹಾಗೂ ಎಲ್ಲ ಬೆಳೆಗಳಿಗೂ ಪರಿಹಾರ ಕೊಡುವ ರೀತಿಯಲ್ಲಿ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಮಾರ್ಪಡಿಸಬೇಕೆಂದು ಒತ್ತಾಯಿಸಿದ ಅವರು, ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಬೆಂಗಳೂರಿನಲ್ಲಿ
ಹಮ್ಮಿಕೊಂಡಿದ್ದು, ದೊಡ್ಡ ಮಟ್ಟದ ಹೋರಾಟ ಸಂಘಟಿಸಲಾಗುವುದು ಎಂದರು. ರೈತ-ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ. ದಿವಾಕರ್, ಅಖೀಲ ಭಾರತ್ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಮೌಲಾ ಮುಲ್ಲಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಅಂಬರೀಶಗೌಡ ಬಳಬಟ್ಟಿ, ಪಾಂಡುರಂಗ ಮಾವಿನಕರ್, ಅಶೋಕ ಮ್ಯಾಗೇರಿ
ಮುಂತಾದವರು ಹಾಜರಿದ್ದರು.