Advertisement

ಅಗರ್‌ವುಡ್‌ ಕೃಷಿಗೆ ರೈತರ ಹಿಂದೇಟು!

03:25 PM Mar 28, 2022 | Team Udayavani |

 ಶೃಂಗೇರಿ: ಮಲೆನಾಡಿನಲ್ಲಿ ಅಡಕೆಗೆ ತಗುಲಿದ ಹಳದಿ ಎಲೆ ರೋಗದಿಂದ ಕಂಗೆಟ್ಟ ಸಂದರ್ಭದಲ್ಲಿ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಅಗರ್‌ವುಡ್‌ ಕೃಷಿಗೆ ಮುಂದಾಗಿದ್ದರು. ಆದರೆ ಇದೀಗ ಯಾವುದೇ ಆದಾಯ ಬರದ ಹಿನ್ನೆಲೆಯಲ್ಲಿ ಅಗರ್‌ವುಡ್‌ ಮರಗಳನ್ನೇ ಕಡಿದು ಉರುವಲಿಗೆ ಬಳಸಲು ಮುಂದಾಗಿದ್ದಾರೆ.

Advertisement

ಕಳೆದ ದಶಕದ ಹಿಂದೆ ಬೆಳೆಗಾರರು ಅಗರ್‌ ಗಿಡಗಳನ್ನು ಖರೀದಿಸಿ ನಾಟಿ ಮಾಡಿ ಬೆಳೆದ ಮರಗಳನ್ನು ಕಡಿತಲೆ ಮಾಡಿ ಅಗರ್‌ವುಡ್‌ ಉತ್ಪಾದಿಸಲು ಮರಗಳಿಗೆ ಇಂಜೆಕ್ಟ್ ಮಾಡಿ ಅಗರ್‌ ಕೃಷಿಗಾಗಿ ಯಥೇತ್ಛ ಖರ್ಚು ಮಾಡಿದರೂ ಯಾವುದೇ ವರಮಾನವಿಲ್ಲದೆ ಬರಿಗೈನಲ್ಲಿ ಕುಳಿತುಕೊಳ್ಳುವಂತಾಗಿದೆ. ಶ್ರೀಗಂಧಕ್ಕಿಂತಲೂ ಅತ್ಯಂತ ಬೆಲೆ ಬಾಳುವ ಅಗರ್‌ವುಡ್‌ ಅತ್ಯಂತ ಮಹತ್ವದ ವಾಣಿಜ್ಯ ಬೆಳೆಯಾಗಿದೆ. ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶದಲ್ಲಿ ಸುಲಭವಾಗಿ ಬೆಳೆಯಬಹುದಾಗಿದೆ. ಕಾರ್ಮಿಕರ ಅವಲಂಬನೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಅಗರ್‌ನಿಂದ ಸುಗಂಧ ದ್ರವ್ಯ ತಯಾರಿಸಬಹುದಾಗಿದೆ ದೇಶೀಯ ಹಾಗೂ ಪರದೇಶಗಳಲ್ಲಿ ಉತ್ತಮವಾದ ಬೇಡಿಕೆ ಇದೆ ಎಂದು ಭಾರೀ ಪ್ರಚಾರ ನೀಡಲಾಗಿತ್ತು. ಆದರೆ ಇದೀಗ ಹುಸಿಯಾಗಿದೆ ಎಂಬುದು ರೈತರ ಆರೋಪವಾಗಿದೆ.

ಪ್ರಸ್ತುತ ಹತಾಶೆಗೊಂಡ ರೈತ ಅಂದು ನಾಟಿ ಮಾಡಿದ ಗಿಡಗಳು ಕಟಾವು ಹಂತಕ್ಕೆ ಬಂದಿದ್ದು ಇಂಜೆಕ್ಟ್ ಮಾಡಿ ಮರಗಳನ್ನು ಸಾಯಿಸಿದರೂ ಮರಗಳನ್ನು ಕೊಳ್ಳುವವರೇ ಇಲ್ಲವಾಗಿದೆ. ಇದರಿಂದ ತೀವ್ರ ನಿರಾಶೆಗೊಂಡ ಬೆಳೆಗಾರರು ಅಗರ್‌ ಕೃಷಿಯನ್ನೇ ಕೈಬಿಡಲು ಮುಂದಾಗಿದ್ದಾರೆ. ಸಾಂಪ್ರದಾಯಿಕ ಬೆಳೆಗಳನ್ನು ನೆಚ್ಚಿ ನಂಬುವ ಪರಿಸ್ಥಿತಿ ಸದ್ಯಕ್ಕೆ ಯಾವ ಬೆಳೆಯಲ್ಲಿಯೂ ಕಾಣದೆ ಇರುವುದರಿಂದ ರೈತರು ದಿಢೀರನೇ ಅಗರ್‌ ಕೃಷಿಯತ್ತ ಒಲವು ತೋರಿಸಿದ್ದರು. ಆದರೆ ಅಗರ್‌ ಕೃಷಿಯಿಂದ ಆದಾಯ ಬಾರದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕೆಲವು ರೈತರು ಅಗರ್‌ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಲು ಮುಂದಾಗಿದ್ದಾರೆ.

ಇನ್ನು ಕೆಲವು ರೈತರು ಅಗರ್‌ ಮರಗಳನ್ನು ಕಡಿದು ಉರುವಲಿಗೆ ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಅಗರ್‌ ಕಂಪೆನಿಯ ವತಿಯಿಂದ ರೈತರಿಗೆ ಕಿಂಚಿತ್ತಾದರೂ ವರಮಾನ ಬರುವ ಸ್ಪಷ್ಟ ಮಾಹಿತಿ ತೋರಿಸದೆ ರೈತರಿಗೆ ಹತಾಶೆ ಮೂಡಿಸಿದ್ದು ಅಗರ್‌ ಕೃಷಿಯಿಂದ ಪ್ರಯೋಜನವಿಲ್ಲವೆಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿತ್ರದುರ್ಗ, ಹುಬ್ಬಳ್ಳಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿ ಜಿಲ್ಲೆಯಲ್ಲದೆ ಹೊರರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಆಂದ್ರ ಪ್ರದೇಶದಲ್ಲೂ 5 ಲಕ್ಷಕ್ಕೂ ಹೆಚ್ಚು ಅಗರ್‌ ಮರಗಳನ್ನು ಬೆಳೆಸಿದ್ದಾರೆ. ಚಿಕ್ಕಮಗಳೂರಿನ ಜಿಲ್ಲೆಯೊಂದರಲ್ಲೇ ಸುಮಾರು 3 ಸಾವಿರಕ್ಕೂ ಅಧಿಕ ಕೃಷಿಕರು 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. 2009 ರಿಂದ ಕಂಪೆನಿಯ ವತಿಯಿಂದ ಈವರೆಗೂ ಸುಮಾರು 25 ಲಕ್ಷಕ್ಕೂ ಹೆಚ್ಚು ಅಗರ್‌ ಗಿಡಗಳನ್ನು ಗಿಡವೊಂದಕ್ಕೆ 50 ರೂ.ನಂತೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.

Advertisement

ಅಗರ್‌ದ್ರವ್ಯ ಉತ್ಪಾದಿಸುವ ಕ್ರಮ

ನಾಟಿ ಮಾಡಿದ ಅಗರ್‌ಮರಗಳನ್ನು 8-10 ವರ್ಷದ ನಂತರ ಸುಮಾರು 2 ಅಡಿ ಸುತ್ತಳತೆಯ ಮರಕ್ಕೆ ರಾಸಾಯನಿಕ ವಸ್ತುವಿನಿಂದ ಇನ್ನಾಕ್ಯುಲೇಷನ್‌ ಮಾಡಿ 6 ತಿಂಗಳು ಅಥವಾ 1 ವರ್ಷದಲ್ಲಿ ಮರ ಸತ್ತುಹೋದ ಮೇಲೆ ಕಟಾವು ಮಾಡಿ ಮರದ ಸಿಪ್ಪೆಯನ್ನು ಕೆತ್ತಿ ಒಣಗಿದ ತಿರುಳನ್ನು ಸಂಗ್ರಹಿಸಲಾಗುತ್ತದೆ. 1 ಮರದಲ್ಲಿ 3-4 ಕೆ.ಜಿ ಚಕ್ಕೆ ಜೊತೆಗೆ ತಿರುಳಿನಿಂದ ದ್ರವ್ಯ ಉತ್ಪಾದಿಸಲಾಗುತ್ತದೆ. ಇನ್ನಾಕ್ಯುಲೇಷನ್‌ ಮಾಡಲು 1 ಮರಕ್ಕೆ ಕನಿಷ್ಟ 1000 ರೂ. ಖರ್ಚು ತಗಲುತ್ತದೆ. ದಿನದಲ್ಲಿ 8-10 ಮರಗಳಿಗೆ ಮಾತ್ರ ಇನ್ನಾಕ್ಯುಲೇಷನ್‌ ಮಾಡಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಮರವು ರೋಗಭಾದೆಗೆ ತಗುಲಿ ನಷ್ಟ ಸಂಭವಿಸಲಿದೆ. ಸೋಂಕು ಪೀಡಿತವಲ್ಲದ ಅಗರ್‌ ಮರದ ಇತರ ಭಾಗಗಳನ್ನು ಕೂಡ ಬಿದಿರಿನಂತೆ ಕಾಗದದ ಉದ್ಯಮಕ್ಕೂ ಕಚ್ಚಾವಸ್ತುವಾಗಿ ಮಾಡಬಹುದಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೇಳುವವರೇ ಇಲ್ಲವಾಗಿದೆ.

ದಶಕದ ಹಿಂದೆ ಅಗರ್‌ನಿಂದ ಉತ್ತಮ ಆದಾಯ ತರಬಹುದು ಎಂಬ ಉದ್ದೇಶದಿಂದ ಅಡಕೆ ತೋಟಗಳಲ್ಲಿ ನಾಟಿ ಮಾಡಲಾಗಿತ್ತು. ಕಂಪೆನಿಯವರು ಇದುವರೆಗೂ ಅಗರ್‌ ಕೃಷಿ ಬಗ್ಗೆ ಯಾವುದೇ ಲಾಭ ತರುವ ನಿಟ್ಟಿನಲ್ಲಿ ರೈತರಿಗೆ ತೋರಿಸುತಿಲ್ಲ. ಮುಂದಿನ ದಿನಗಳಲ್ಲಿ ಅಗರ್‌ನಿಂದ ಲಾಭ ಗಳಿಸಬಹುದು ಎಂಬ ಸ್ಪಷ್ಟ ಮಾಹಿತಿಯನ್ನು ನೀಡಬೇಕು ಭಾಸ್ಕರ್‌, ಮಂಜುನಾಥಯ್ಯ, ರಾಮಮಮೂರ್ತಿ, ರತ್ನಾಕರ ಮತ್ತಿತರರು. ಅಗರ್‌ ಬೆಳೆಗಾರರು, ಶೃಂಗೇರಿ ತಾಲೂಕು

ವನದುರ್ಗಿ ಅಗರ್‌ವುಡ್‌ ಸಂಸ್ಥೆಯು ಬೆಳೆಗಾರರ ಪಾಲುದಾರಿಕೆ ಸಹಭಾಗಿತ್ವದಲ್ಲಿ ಅಗರ್‌ ಕೃಷಿ ಕೈಗೊಂಡಿದೆ. ಅಗರ್‌ ಮರಗಳಿಂದ ಗುಣಮಟ್ಟದ ಅಗರ್‌ ಉತ್ಪಾದನೆಯಾಗಬೇಕೆಂದು ಹಲವಾರು ರೀತಿಯ ತಂತ್ರಜ್ಞಾನದ ಮೂಲಕ ಪ್ರಾಯೋಗಿಕವಾಗಿ ಇನ್ನಾಕ್ಯುಲೇಷನ್‌ ನಡೆಸಿ ವಾಣಿಜ್ಯ ಬೆಳೆಯಾಗಿ ಕೈಗೊಳ್ಳಲು ಶ್ರಮಿಸುತ್ತಿದೆ. ಈಗಾಗಲೇ ಅಸ್ಸಾಂನಲ್ಲಿ ಅಗರ್‌ ಉತ್ಪಾದನೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ರೈತರು ನಿರಾಶೆಗೊಳ್ಳದೆ ಅಗರ್‌ ಕೃಷಿ ಕೈಗೊಳ್ಳಬಹುದು. ಯಾವುದೇ ಬೆಳೆಗೂ ಖರ್ಚು ಮಾಡದೆ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೂ ಕೂಡ ವ್ಯಾಕ್ಸಿನೇಷನ್‌, ಇನ್ನಾಕ್ಯುಲೇಷನ್‌ ಮಾಡಬೇಕಾಗುತ್ತದೆ. ರೈತರಿಗೆ ಲಾಭ ಬಾರದ ಹಿನ್ನೆಲೆಯಲ್ಲಿ ನಿರಾಶರಾಗುವುದು ಸಹಜ – ಧರ್ಮೇಂದ್ರ ಕುಮಾರ್‌, ಸಿಇಒ, ವನದುರ್ಗಿ ಅಗರ್‌ವುಡ್‌ ಕಂಪೆನಿ

Advertisement

Udayavani is now on Telegram. Click here to join our channel and stay updated with the latest news.

Next