ಬೆಂಗಳೂರು: ನಗರದ ಪ್ರಮುಖ ಮತ್ತು ಅತಿದೊಡ್ಡ ಮಾರುಕಟ್ಟೆಗಳು ಸೀಲ್‌ಡೌನ್ ಆದ ಬೆನ್ನಲ್ಲೇ ಅದರ ಬಿಸಿ ಈಗ ತರಕಾರಿ ಮತ್ತು ಹೂವು ಬೆಳೆಗಾರರಿಗೆ ತಟ್ಟುತ್ತಿದೆ. ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಸೀಲ್‌ಡೌನ್ ಹಾಗೂ ನಗರದಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚಳದಿಂದಾಗಿ ರೈತರು ತರಕಾರಿ, ಹೂವು-ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಹಿಂದೇಟು ಹಾಕುತ್ತಿದ್ದಾರೆ.
ಹೊರವಲಯದ ರಸ್ತೆ ಬಳಿ ಇರುವ ಬೀದಿ ವ್ಯಾಪಾರಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ನಿತ್ಯ ಬಿಡದಿ, ರಾಮನಗರ, ಕನಕಪುರ, ದೇವನಹಳ್ಳಿ, ಕೋಲಾರ, ಚಿಕ್ಕಬಳ್ಳಾಪುರ, ದಾಬಸ್‌ಪೇಟೆ, ತುಮಕೂರು ಮತ್ತಿತರ ಕಡೆಯಿಂದ ತೋಟಗಾರಿಕೆ ಬೆಳೆಗಳು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತವೆ. ಸೀಲ್ ಡೌನ್‌ನಿಂದಾಗಿ ಬೆಂಗಳೂರು ರಸ್ತೆ ಮಾರ್ಗದಲ್ಲಿಯೇ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಸದ್ಯ ಟೊಮೇಟೊ ಕೆ.ಜಿ.ಗೆ 20 ರೂ., ಈರುಳ್ಳಿ 20 ರೂ., ಹಸಿಮೆಣಸಿನಕಾಯಿ 30 ರೂ., ಬದನೆಕಾಯಿ 30 ರೂ., ಕ್ಯಾರೆಟ್ 35 ರೂ., ಬೀನ್ಸ್ 40 ರೂ., ಹೀರೇಕಾಯಿ 30 ರೂ., ಸೌತೆಕಾಯಿ 20 ರೂ. ಇದ್ದು, ರೈತರಿಂದ ಕೆ.ಜಿ.ಗೆ ಕೇವಲ 5-10 ರೂ.ಗೆ ಪಡೆಯಲಾಗುತ್ತಿದೆ. ಇದರಿಂದ ರೈತರು ಬೆಳೆಗೆ ಖರ್ಚು ಮಾಡಿದಷ್ಟೂ ಹಣ ಲಭ್ಯವಾಗುತ್ತಿಲ್ಲ. ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ ಮಳೆ ಉತ್ತಮವಾಗಿ ಆಗುತ್ತಿದ್ದು, ತರಕಾರಿ, ಹೂವು ಹೆಚ್ಚಾಗಿ ಬೆಂಗಳೂರಿಗೆ ಬರುತ್ತಿದೆ. ಆದರೆ, ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಹಾಗೂ ಮೃತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,
ರೈತರು ಬೆಂಗಳೂರಿನತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ನಗರಕ್ಕೆ ತರಕಾರಿಗಳ ಕೊರತೆಯಿಂದ ದರ ಏರಿಕೆ ಬಿಸಿ ತಟ್ಟಲಿದೆ ಎಂದು ಕಲಾಸಿಪಾಳ್ಯ ಮಾರುಕಟ್ಟೆ ಸಗಟು ವ್ಯಾಪಾರಿ ಗಿರೀಶ್ ತಿಳಿಸಿದ್ದಾರೆ. ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಸೀಲ್‌ಡೌನ್‌ನಿಂದಾಗಿ ರೈತರು ಚಾಮರಾಜಪೇಟೆ, ಮೈಸೂರು ರಸ್ತೆ, ಮಾರುಕಟ್ಟೆ ಸುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಸವಾಲು ನಡೆಯುತ್ತಿವೆ. ಸೀಲ್‌ಡೌನ್ ಮುಂಚೆ ಬರುತ್ತಿದ್ದಷ್ಟು ರೈತರು ಬರುತ್ತಿಲ್ಲ.
ದುಪ್ಪಟ್ಟು ಹಣ ಕೇಳುವ ಆಟೋದವರು: ತೈಲ ಬೆಲೆ ಏರಿಕೆಯಿಂದ ಆಟೋದವರು ಹೆಚ್ಚಿನ ಬೆಲೆ ಕೇಳುತ್ತಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಾಕ್‌ಡೌನ್ ಮೊದಲು ಆನೆದೊಡ್ಡಿ, ಗೊಲ್ಲಹಳ್ಳಿ, ಬಿಲ್ಲೆದೊಡ್ಡಿ, ಕಂಚುಗರಹಳ್ಳಿ ಸೇರಿ ಸುತ್ತಲಿನ ಹಳ್ಳಿಗಳಿಂದ ಒಂದು ಚೀಲ ಬೇಬಿಕಾನ್, ಮಶ್ರೂಮ್ ಹಾಗೂ ವಿವಿಧ ತರಕಾರಿಗೆ ನೂರು ರೂ. ನೀಡಲಾಗುತ್ತಿತ್ತು. ಆದರೆ ಈಗ ತೈಲ ಬೆಲೆ ಹೆಚ್ಚಳ ನೆಪವೊಡ್ಡಿ ಒಂದು ಚೀಲಕ್ಕೆ 150-200 ರೂ. ಹೆಚ್ಚಳ ಮಾಡಿದ್ದಾರೆ. ಇದರಿಂದಾಗಿ ಬೆಂಗಳೂರು ಮಾರುಕಟ್ಟೆಗೆ ಹೋಗುವ ಬದಲು ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಬಿಡದಿಯ ರೈತ ರಾಮಣ್ಣ ಅಲವತ್ತುಕೊಂಡರು.
ಅನ್ಯ ರಾಜ್ಯದಿಂದ ಈರುಳ್ಳಿ ಹಾಗೂ ಆಲೂಗಡ್ಡೆ ಆಮದು ಮಾಡಿಕೊಳ್ಳುತ್ತಿಲ್ಲ. ರಾಜ್ಯದಲ್ಲೇ ಬೆಳೆದ ಬೆಳೆ ಮಾರಾಟ ಮಾಡಲಾಗುತ್ತಿದೆ. ದಾಸನಪುರದಲ್ಲಿ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದ್ದು, ವೈರಸ್ ಭೀತಿ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
-ಉದಯ್ ಶಂಕರ್, ಈರುಳ್ಳಿ-ಆಲೂಗಡ್ಡೆ ವರ್ತಕರ ಸಂಘದ ಪದಾಧಿಕಾರಿ
ಸದ್ಯ ತರಕಾರಿ ಮತ್ತು ಹಣ್ಣುಗಳ ಅಭಾವ ಉಂಟಾಗಿಲ್ಲ. ಕೋವಿಡ್ 19 ಹೆಚ್ಚಳ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಸೀಲ್ ಡೌನ್ ಮಾಡಲಾಗಿದ್ದು, ರೈತರು ತರಕಾರಿ ತರುವ ಪ್ರಮಾ ಣ ಕಡಿಮೆ ಮಾಡಿದ್ದಾರೆ. ಜನರಿಗೆ ತರಕಾರಿ ಹಾಗೂ ಹಣ್ಣುಗಳ ಕೊರತೆ ಎದುರಾಗುವುದಿಲ್ಲ. ವೈರಸ್ ಭೀತಿ ಹಿನ್ನೆಲೆ ಪೂರೈಕೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
-ಗೋಪಿ, ಹಣ್ಣು ಮತ್ತು ತರಕಾರಿ ವರ್ತಕರ ಸಂಘದ ಪದಾಧಿಕಾರಿ
* ಮಂಜುನಾಥ ಗಂಗಾವತಿ