Advertisement

ರೈತರಿಗಿದೆ ಸರ್ಕಾರದ ಸಾಲ ತೀರಿಸುವ ಸಾಮರ್ಥ್ಯ

09:53 PM Jan 15, 2022 | Team Udayavani |

ಭರಮಸಾಗರ: ಬಿಚ್ಚುಗತ್ತಿ ಭರಮಣ್ಣನಾಯಕ 332 ವರ್ಷಗಳ ಹಿಂದೆ ಕೆರೆ ಕಟ್ಟಿಸಿದ್ದರಿಂದ ಭರಮಸಾಗರ ಕೆರೆಗೆ ನೀರು ತುಂಬಿಸಲು ಸಾಧ್ಯವಾಯಿತು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ದೊಡ್ಡಕೆರೆಯಲ್ಲಿ ಆಯೋಜಿಸಿದ್ದ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗಳು ಅವಳಿ ಜವಳಿ ಮಕ್ಕಳಿದ್ದಂತೆ ಎಂದರು. ರೈತರು ಸೋಮಾರಿಗಳಲ್ಲ. ರೈತರಿಗೆ ನೀರು ನೀಡಿದರೆ ಸರ್ಕಾರದ ಸಾಲ ತೀರಿಸುವ ಸಾಮರ್ಥ್ಯವಿದೆ. ಜಗಳೂರು ಏತನೀರಾವರಿ ಯೋಜನೆ ಇಷ್ಟೋತ್ತಿಗೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕಿತ್ತು. ಆದರೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಬಳಿ 800 ಮೀಟರ್‌ ಉದ್ದದ ಪೈಪ್‌ಲೈನ್‌ ಕಾಮಗಾರಿಗೆ ಕೆಲ ರೈತರು ಅಡ್ಡಿಪಡಿಸುತ್ತಿದ್ದಾರೆ. ಆರು ಕೋಟಿ ಪರಿಹಾರ ಕೇಳುತ್ತಿದ್ದಾರೆ.

ಮನುಷ್ಯನ ಸ್ವಾರ್ಥಕ್ಕೆ ಕೊನೆಯೇ ಇಲ್ಲವಾಗಿದೆ. ನಮ್ಮ ಹೆಸರಿನ ಮುಂದೆ 1108 ಎಂಬ ಸಂಖ್ಯೆಯಿದೆ. ಅದು ನಮ್ಮ ಮಠದ ಶ್ರೇಷ್ಠತೆಗೆ ರಾಜಮಹಾರಾಜರು ಕೊಟ್ಟ ಬಿರುದಾವಳಿಯಾಗಿದೆ. ಮರಳಸಿದ್ದರಿಂದ ಇಲ್ಲಿಯವರೆಗೆ ನಾವು 21ನೇ ಗುರುಗಳಾಗಿದ್ದೇವೆ ಎಂದರು. ಪೂರ್ಣ ಕುಂಭ ಹೊತ್ತ ಮಹಿಳೆಯರು ಶ್ರೀಗಳನ್ನು ಸ್ವಾಗತಿಸಿದರು. ಗಂಗಾಪೂಜೆ, ಶ್ರೀಗಳಪಾದ ಪೂಜೆ ಸಲ್ಲಿಸಲಾಯಿತು. ಬಳಿಕ ಕೆರೆಗೆ ಬಾಗಿನ ಅರ್ಪಿಸಲಾಯಿತು. ಜಗಳೂರು ಮಾಜಿ ಶಾಸಕ ಎಚ್‌.ಪಿ. ರಾಜೇಶ್‌, ಎಚ್‌. ಎನ್‌. ತಿಪ್ಪೇಸ್ವಾಮಿ, ಡಿ.ವಿ. ಶರಣಪ್ಪ, ಶಶಿ ಪಾಟೀಲ್‌, ಎಚ್‌.ಎಂ. ಮಂಜುನಾಥ್‌, ತೀರ್ಥಪ್ಪ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next