Advertisement

ಅನ್ನದಾತನ ನಿರೀಕ್ಷೆಗೆ ಕಳಪೆ ಬೀಜ ಕೊಳ್ಳಿ

05:09 PM Jun 10, 2020 | Suhan S |

ಬೆಳಗಾವಿ: ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪ ಹಾಗೂ ಈ ವರ್ಷ ಕೋವಿಡ್ ವೈರಸ್‌ ಹಾವಳಿಯಿಂದ ಸಂಪೂರ್ಣ ನಲುಗಿ ಹೋಗಿರುವ ರೈತರಲ್ಲಿ ಮುಂಗಾರು ಆರಂಭದಲ್ಲೇ ಬಿದ್ದ ಒಂದೆರಡು ಉತ್ತಮ ಮಳೆ ಹೊಸ ಆಶಾಭಾವನೆ ಮೂಡಿಸಿದೆ. ಇದೇ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆದಿವೆ.

Advertisement

ಆದರೆ ಬಿತ್ತನೆ ಕಾರ್ಯದ ಭರದಲ್ಲೇ ಕಳಪೆ ಬೀಜಗಳ ಪೂರೈಕೆ ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳಪೆ ಬೀಜಗಳ ಹಾವಳಿ ಮತ್ತೆ ನಷ್ಟದ ಭೀತಿ ಮೂಡಿಸಿದೆ. ಸಹಜವಾಗಿಯೇ ಇದು ಸರಕಾರ ಹಾಗೂ ಬೀಜದ ಕಂಪನಿಗಳ ವಿರುದ್ಧ ಆಕ್ರೋಶ ಹುಟ್ಟುಹಾಕಿದೆ.

ಈ ಬಾರಿ ಮುಂಗಾರು ಬೇಗ ಆರಂಭವಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಕೃಷಿ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ರೈತರಿಗೆ ಬೀಜ ಮತ್ತು ಗೊಬ್ಬರ ಖರೀದಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಜಿಲ್ಲೆಯಲ್ಲಿ ಒಟ್ಟು 35 ರೈತಸಂಪರ್ಕ ಕೇಂದ್ರಗಳು, ಇದಲ್ಲದೆ 139 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಹೆಚ್ಚುವರಿಯಾಗಿ 22 ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಪ್ರತಿಶತ 45 ಬಿತ್ತನೆಯಾಗಿರುವುದು ಹೊಸ ಆಶಾಭಾವನೆ ಮೂಡಿಸಿತ್ತು.

ಆದರೆ ಈಗ ಬೈಲಹೊಂಗಲ, ಕಿತ್ತೂರು, ಸವದತ್ತಿ ಮೊದಲಾದ ತಾಲೂಕುಗಳ ರೈತರಿಂದ ಕಳಪೆ ಸೋಯಾಬೀನ್‌ ಬೀಜಗಳ ವಿತರಣೆ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿರುವುದರಿಂದ ಕೃಷಿ ಇಲಾಖೆ ಅಧಿಕಾರಿಗಳು ಇಕ್ಕಿಟ್ಟಿನಲ್ಲಿ ಸಿಲುಕಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ತಾಂತ್ರಿಕ ತಜ್ಞರೊಂದಿಗೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದರ ಮಧ್ಯೆ ಸ್ವತಃ ಕೃಷಿ ಸಚಿವರೇ ಸೋಯಾಬೀನ್‌ ಬೀಜಗಳಲ್ಲಿ ದೋಷ ಕಂಡುಬಂದಿದೆ. ರಾಜ್ಯಕ್ಕೆ ವಿತರಣೆಯಾಗಿರುವ ಸೋಯಾಬೀನ್‌ ಬೀಜದಲ್ಲಿ ಮೊಳಕೆ ಬರಿಸುವ ಸಾಮರ್ಥ್ಯ ಕಡಿಮೆ ಇರುವುದರಿಂದ ರೈತರು ಈ ವರ್ಷ ಸೋಯಾಬೀನ್‌ ಬೆಳೆಯುವುದನ್ನು ಬಿಡುವುದು ಸೂಕ್ತ ಎಂದು ಹೇಳಿರುವುದು ಈಗಾಗಲೇ ಸೋಯಾಬೀನ್‌ ಬಿತ್ತನೆ ಮಾಡಿ ಸಾವಿರಾರು ರೂ. ವೆಚ್ಚ ಮಾಡಿರುವ ರೈತರು ಆತಂಕದಲ್ಲಿ ಸಿಲುಕಿದ್ದಾರೆ.

Advertisement

ಜಿಲ್ಲೆಯಲ್ಲಿ ಒಟ್ಟು 6.43 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದೆ. ಈ ಅವಧಿಯಲ್ಲಿ ಭತ್ತ, ಜೋಳ, ರಾಗಿ, ಹತ್ತಿ, ಸಜ್ಜೆ, ಮೆಕ್ಕೆಜೋಳ, ಶೇಂಗಾ, ಸೋಯಾಬೀನ್‌, ಸೂರ್ಯಕಾಂತಿ, ಕಬ್ಬು, ಬೆಳೆಗಳ ಜತೆಗೆ ಸಾವೆ, ನವಣೆ, ಬರಗುಗಳಂತಹ ಸಿರಿಧಾನ್ಯ ಬೆಳೆಯಲು ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಸೋಯಾಬೀನ್‌ ಪ್ರಮುಖ ಬೆಳೆಯಾಗಿದ್ದು, ಈಗಾಗಲೇ ಸುಮಾರು 35 ಸಾವಿರ ಕ್ವಿಂಟಲ್‌ ಬೀಜದ ವಿತರಣೆ ಮಾಡಲಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

ಬೀಜ ಹಾಗೂ ರಸಗೊಬ್ಬರದ ಸಂಗ್ರಹದಲ್ಲಿ ಕೊರತೆ ಇಲ್ಲ. ಜಿಲ್ಲೆಗೆ ಒಟ್ಟು 1.70 ಲಕ್ಷ ಮೆಟ್ರಿಕ್‌ ಟನ್‌ ರಾಸಾಯನಿಕ ಗೊಬ್ಬರದ ಅವಶ್ಯಕತೆ ಇದ್ದು, ಈಗ 1.15 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರದ ದಾಸ್ತಾನು ಇದೆ. ಈ ರಸಗೊಬ್ಬರವನ್ನು ಆಯಾ ತಿಂಗಳ ಹಂಚಿಕೆ ಆಧರಿಸಿ ಬಿಡುಗಡೆ ಮಾಡಲು ಇಲಾಖೆ ಕ್ರಮಕೈಗೊಂಡಿದೆ ಎಂಬುದು ಕೃಷಿ ಇಲಾಖೆ ಉಪನಿರ್ದೇಶಕ ಎಚ್‌.ಡಿ. ಕೋಳೇಕರ ಹೇಳಿಕೆ.

ಸೋಯಾಬೀನ್‌ ಬೀಜದಲ್ಲಿ ದೋಷ ಇರುವುದು ಕಂಡುಬಂದಿದೆ. ಬೈಲಹೊಂಗಲ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿತ್ತನೆ ಮಾಡಿರುವುದು ಮೊಳಕೆ ಬಂದಿಲ್ಲ. ಸೋಯಾಬೀನ್‌ ಹಾಕಿದ ಅನೇಕ ರೈತರು ದೂರು ನೀಡಿದ್ದಾರೆ. ದಟ್ಟವಾಗಿ ಬಿತ್ತನೆ ಮಾಡಲು ರೈತರಿಗೆ ಸಲಹೆ ನೀಡಲಾಗಿದೆ. ಉಳಿದ ಬೀಜಗಳನ್ನು ಕಂಪನಿಗೆ ಮರಳಿ ಕಳಿಸಲಾಗುತ್ತಿದೆ.  -ಎಚ್‌.ಡಿ. ಕೋಳೇಕರ, ಕೃಷಿ ಇಲಾಖೆ ಉಪನಿರ್ದೇಶಕ

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next