Advertisement

ಬಜೆಟ್‌ನಲ್ಲಿ ರೈತರ ಸುಸ್ತಿ ಸಾಲ ಮನ್ನಾಕ್ಕೆ ಚಿಂತನೆ

11:17 PM Jan 22, 2020 | Lakshmi GovindaRaj |

ಬೆಂಗಳೂರು: ಕಸ್ಕಾರ್ಡ್‌ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರೈತರ ಸುಸ್ತಿ ಸಾಲವನ್ನು ಮನ್ನಾ ಮಾಡುವ ಕುರಿತು ಸರಕಾರ ಚಿಂತನೆ ನಡೆಸಿದೆ. ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲದ ಮೇಲಿನ ಸುಸ್ತಿಯನ್ನು ಒಂದು ಬಾರಿ ಮನ್ನಾ ಮಾಡುವಂತೆ ಬಜೆಟ್‌ನಲ್ಲಿ ಘೋಷಿಸಲು ಇಲಾಖೆ ಮೂಲಕ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲು ಸಹಕಾರ ಸಂಘಗಳ ನಿಬಂಧಕರು ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಕಸ್ಕಾರ್ಡ್‌)ಗಳಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಸಾಲ ಪಡೆದ ರೈತರು ನಿಯಮಿತವಾಗಿ ಸಾಲ ಮರು ಪಾವತಿ ಮಾಡದಿರುವುದರಿಂದ 1977 ರಿಂದಲೂ ರೈತರು ಸುಸ್ತಿ ಸಾಲಗಾರರಾಗಿದ್ದು, ಅದು ನಿರಂತರವಾಗಿ ಮುಂದುವರೆಯುತ್ತಲೇ ಇದೆ.

ಯಾವುದಕ್ಕೆ ಸಾಲ?: ರಾಜ್ಯದಲ್ಲಿರುವ 177 ಕಾಸ್ಕಾರ್ಡ್‌ ಬ್ಯಾಂಕ್‌ನಿಂದ ರೈತರಿಗೆ ಬೆಳೆ ಸಾಲದ ಹೊರತಾಗಿ ಕೃಷಿ ಅಭಿವೃದ್ಧಿ ಮತ್ತು ಭೂಮಿಯ ಉತ್ಪಾದಕತೆ ಹೆಚ್ಚಿಸಲು ಕೊಳವೆ ಬಾವಿ, ಕೆರೆಗಳ ನಿರ್ಮಾಣ, ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು, ಟ್ರ್ಯಾಕ್ಟರ್‌, ಧಾನ್ಯ ಒಕ್ಕಣೆ ಯಂತ್ರ, ಕೃಷಿ ಉತ್ಪನ್ನಗಳ ಮಾರುಕಟ್ಟೆಗಾಗಿ, ಗುಡಿ ಕೈಗಾರಿಕೆ ಸೇರಿದಂತೆ ರೈತರಿಗೆ ಅವರ ಜಮೀನು ಅಡಮಾನ ಇಟ್ಟುಕೊಂಡು ಸಾಲ ನೀಡಲಾಗುತ್ತಿದೆ.

ರೈತರಿಗೆ ಇದುವರೆಗೆ ಕೃಷಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯದಲ್ಲಿ ಸುಮಾರು 13.39 ಲಕ್ಷ ರೈತರಿಗೆ 5,289 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಸುಮಾರು 311 ಕೋಟಿ ರೂಪಾಯಿ ಬಡ್ಡಿ ಇದ್ದು, 320 ಕೋಟಿ ರೂಪಾಯಿ ಸುಸ್ತಿ ಬಡ್ಡಿಯಾಗಿದೆ. ಸುಮಾರು 86 ಸಾವಿರ ರೈತರು ಸುಸ್ತಿ ಸಾಲಗಾರರಾಗಿದ್ದಾರೆ.

ಸುಸ್ತಿ ಸಾಲ ಮನ್ನಾ ಪ್ರಸ್ತಾಪ: ಸುಮಾರು ನಲವತ್ತು ವರ್ಷಗಳಿಂದ ರೈತರು ಪಡೆದ ಸಣ್ಣ ಪುಟ್ಟ ಸಾಲದ ಮೇಲಿನ ಸುಸ್ತಿ ಬಡ್ಡಿ 320 ಕೋಟಿಯಾಗಿದ್ದು, ಆ ಹಣವನ್ನು ತೀರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಬಡ್ಡಿ ತೀರಿಸದೇ ಬ್ಯಾಂಕ್‌ನವರು ಹೊಸ ಸಾಲ ನೀಡುತ್ತಿಲ್ಲ. ಹೊಸ ಸಾಲ ನೀಡದೇ ಇದ್ದರೆ, ಬ್ಯಾಂಕ್‌ ವಹಿವಾಟು ನಡೆಯದಿರುವುದರಿಂದ ಬ್ಯಾಂಕ್‌ ವ್ಯವಹಾ ರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಬ್ಯಾಂಕ್‌ಗಳೂ ಕೂಡ ಸಂಕಷ್ಟಕ್ಕೆ ಸಿಲುಕಿವೆ.

Advertisement

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರು ಹಾಗೂ ಬ್ಯಾಂಕ್‌ನ ಪುನರುಜ್ಜೀವನದ ದೃಷ್ಠಿಯಿಂದ ರೈತರ ಬಹುದಿನಗಳ ಸುಸ್ತಿ ಸಾಲವನ್ನು ಒಂದು ಬಾರಿ ಮನ್ನಾ ಮಾಡಿದರೆ, ರೈತರು ಚಾಲ್ತಿ ಸಾಲ ಹಾಗೂ ಬಡ್ಡಿಯನ್ನು ಕಟ್ಟಲು ಅವಕಾಶವಾಗುತ್ತದೆ. ಇದರಿಂದ ರೈತರು ಮತ್ತು ಬ್ಯಾಂಕಿಗೂ ಅನುಕೂಲವಾಗುತ್ತದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ.

ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಸುಸ್ತಿ ಸಾಲ ಮನ್ನಾ ಮಾಡಲು ತೀರ್ಮಾನ ಕೈಗೊಂಡರೆ ಸುಮಾರು 620 ಕೋಟಿ ರೂ.ಅಸಲು ಹಾಗೂ ಸುಮಾರು 311 ಕೋಟಿ ರೂ.ಬಡ್ಡಿ ಹಣವನ್ನು ರೈತರಿಂದ ಮರು ಪಾವತಿ ಸುವಂತೆ ಮನವೊಲಿಸಲು ಅನುಕೂಲವಾಗುತ್ತದೆ. ಸುಸ್ತಿ ಬಡ್ಡಿ ಮನ್ನಾ ಮಾಡಿದರೆ ಚಾಲ್ತಿಯಲ್ಲಿರುವ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರು ಪಾವತಿ ಮಾಡಲು ರೈತರು ಆಸಕ್ತಿ ವಹಿಸುತ್ತಾರೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಹೀಗಾಗಿ, ಸಾಲ ಪಡೆದು ಮರು ಪಾವತಿ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿರುವ ರೈತರ ಸುಸ್ತಿ ಸಾಲ ಮನ್ನಾ ಮಾಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕರ ಮೂಲಗಳು ತಿಳಿಸಿವೆ.

ಸುಸ್ತಿ ಸಾಲದ ಹಿನ್ನೆಲೆ: 2016ರಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ 110 ತಾಲೂಕುಗಳು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಾಲ ಪಡೆದ ರೈತರ ಸುಸ್ತಿ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್‌ ಅಧಿಕಾರಿಗಳು ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸುಸ್ತಿ ಸಾಲದಾರರಾಗಿರುವ ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್‌ ನೀಡುವುದು,

ಅವರ ವಿರುದ್ಧ ಪ್ರಕರಣ ದಾಖಲಿಸುವುದು ಹಾಗೂ ರೈತರ ವಿರುದ್ಧ ವಿಚಾರಣೆ ನಡೆಸಿ ಆಸ್ತಿ ಮಾರಾಟದಂತಹ ಕಠಿಣ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದರು. ನಂತರ ಬಂದ ಮೈತ್ರಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ 2019ರ ಡಿಸೆಂಬರ್‌ 27ರಂದು ಸುಸ್ತಿ ಸಾಲಗಾರರ ಸಾಲ ವಸೂಲಿಗೆ ಹಿಂದಿನ ಸರ್ಕಾರ ಹೇರಿದ್ದ ನಿರ್ಬಂಧ ತೆರವುಗೊಳಿಸುವ ಆದೇಶ ಹೊರಡಿಸಿತ್ತು.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next