ಬಳ್ಳಾರಿ: ಬೆಳೆ ಸಮೀಕ್ಷೆ ಉತ್ಸವದ ಅಂಗವಾಗಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಸಮೀಪದ ಹುಲಿಕೆರೆ ಗ್ರಾಮದ ಶರಣಪ್ಪ ಅವರ ಹೊಲದಲ್ಲಿ ಶುಕ್ರವಾರ ವೀಕ್ಷಣೆ ಮಾಡಿದರು.
ಶರಣಪ್ಪ ಅವರ ಪುತ್ರ ಗಿರೀಶ್ ಅವರು ಹೊಲದಲ್ಲಿ ನಿಂತುಕೊಂಡು ಬೆಳೆ ಸಮೀಕ್ಷೆ ಆಪ್ ಡೌನ್‌ಲೋಡ್ ಮಾಡಿಕೊಂಡು ತನ್ನ ಬೆಳೆಯ ಚಿತ್ರ ಹಾಗೂ ವಿವರವನ್ನು ದಾಖಲಿಸುವುದನ್ನು ಸಚಿವ ಬಿ.ಸಿ.ಪಾಟೀಲ್ ಅವರು ಪರಿಶೀಲಿಸಿದರು.
ಗಿರೀಶ್ ಅವರು ಬೆಳೆ ಸಮೀಕ್ಷೆ ಆಪ್ ನಲ್ಲಿ ದಾಖಲಿಸುವ ಬಗೆ ಹಾಗೂ ತಾವು ಸಾವಯವ ಗೊಬ್ಬರ ಬೆಳೆಸಿಕೊಂಡು ಸೂರ್ಯಕಾಂತಿ ಬೆಳೆ ಬೆಳೆದಿರುವುದರ ವಿವರವನ್ನು ಸಚಿವ ಪಾಟೀಲ್ ಅವರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಬೆಳೆ ಸಮೀಕ್ಷೆ ಉತ್ಸವವು ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಯಾಗಿದೆ. ಈಗಾಗಲೇ ಸಮೀಕ್ಷೆಯು ರಾಜ್ಯಾದ್ಯಂತ ಆರಂಭವಾಗಿದ್ದು, ಈ ಬಾರಿಯ ಬೆಳೆಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಮುಂದೆ ಬಂದು ಆಪ್ ನಲ್ಲಿ ಬೆಳೆ ವಿವರ ದಾಖಲಿಸಬೇಕು ಎಂದು ಅವರು ಕೋರಿದರು.ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸುವ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕು. ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕು. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೈತರು ದಾಖಲಿಸಿದ ಬೆಳೆ ವಿವರಕ್ಕೂ, ಛಾಯಾಚಿತ್ರಕ್ಕೂ ತಾಳೆಯಾಗದ ಸಂದರ್ಭದಲ್ಲಿ ಮೇಲ್ವಿಚಾರಕರು ಅಂಥ ಮಾಹಿತಿಯನ್ನು ತಿರಸ್ಕರಿಸಿ ಮರು-ಸಮೀಕ್ಷೆಗೆ ಖಾಸಗಿಯವರನ್ನು ಕಳುಹಿಸುತ್ತಾರೆ. ಒಂದು ವೇಳೆ ರೈತರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್‌ಗಳನ್ನು ಸಹ ತಮ್ಮ ಮೊಬೈಲ್ ಆ್ಯಪ್‌ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ಸ್ವತಃ ತಮ್ಮ ಬೆಳೆ ವಿವರಗಳನ್ನು ದಾಖಲಿಸಲು ಆ. 28 ರಂದು ಕೊನೆಯ ದಿನವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.