ಯಾದಗಿರಿ: ಯಾವುದೇ ಷರತ್ತುಗಳಿಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರ ಸಹಕಾರಿ ಸಂಘಗಳ ಕೇವಲ 50 ಸಾವಿರ ರೂ. ಹಲವಾರು ಷರತ್ತುಗಳೊಂದಿಗೆ ಸಾಲ ಮನ್ನಾ ಮಾಡಿದೆ. ಆದರೆ ಯಾವುದೇ ಷರತ್ತುಗಳಿಲ್ಲದೆ ಇನ್ನುಳಿದ ಸಹಕಾರಿ ಕ್ಷೇತ್ರ, ಮಹಿಳಾ ಸ್ವ-ಸಹಾಯ ಸಂಘಗಳ ಎಲ್ಲ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರಕಾರ ಸಹ ಷರತ್ತುಗಳಿಲ್ಲದೆ ಸಾಲ ಮನ್ನಾ ಮಾಡಬೇಕು
ಎಂದು ಆಗ್ರಹಿಸಿದರು.
ಬೆಳೆ ವಿಮೆ, ಬರಗಾಲ ಪರಿಹಾರದ ಮೊತ್ತವನ್ನು ವೈಜ್ಞಾನಿಕವಾಗಿ ಕ್ರಮ ಕೈಗೊಂಡು ರೈತರಿಗೆ ವಿತರಿಸಬೇಕು. ಜೂನ್ 10ರ ಒಳಗಿನ ತೊಗರಿ ಖರೀದಿ ಕೇಂದ್ರದಲ್ಲಿನ ಉಳಿದ ತೊಗರಿಗಳನ್ನು ಖರೀದಿಸುವುದು ಮತ್ತು ಶೀಘ್ರ ರೈತರಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ನಕಲಿ ಬೀಜ, ಕ್ರಿಮಿನಾಶಕ, ಗೊಬ್ಬರ ತಡೆಯುವದು. ಬೆಳೆ ಬೆಳೆಯಲು ಅಗತ್ಯ ಕ್ರಮ ಕೈಗೊಂಡು ಕೃಷಿ ಅಭಿವೃದ್ದಿ ಪಡಿಸುವ ಕಾರ್ಯಕ್ರಮಗಳು ಪ್ರತಿಯೊಬ್ಬ ರೈತರಿಗೆ ತಲುಪಿಸಬೇಕು. ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಕೆರೆಯ ನೀರನ್ನು 14 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದ್ದು, ಕಾಮಗಾರಿ ಕೆಲಸವನ್ನು
ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ, ಮಹಾದೇವಿ ಬೇವಿನಾಳಮಠ, ಹಣಮಂತ ಕೊಂಗಂಡಿ, ದೇವಿಂದ್ರಪ್ಪಗೌಡ ಮಾಲಗತ್ತಿ, ಶಿವಯೋಗಿ ಯಾದಗಿರಿ, ಬಸವರಾಜಪ್ಪಗೌಡ ಹೆಮ್ಮಡಗಿ, ಭೀಮರಾಯ ಯಡಹಳ್ಳಿ, ಮಲ್ಲಣ್ಣ ವಡಗೇರಿ, ಮಲ್ಕಣ್ಣ ಚಿಂತಿ, ಸಿದ್ದನಗೌಡ ಬಿರಾದಾರ ಇದ್ದರು.