ಲಕ್ಷ್ಮೇಶ್ವರ: ಅಕಾಲಿಕ, ಅತಿವೃಷ್ಟಿಯಿಂದ ರೈತರಿಗಾಗಿರುವ ಎಲ್ಲ ಬೆಳೆಗಳ ನಷ್ಟದ ಪರಿಹಾರವನ್ನು ಆದಷ್ಟು ಶೀಘ್ರ ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಬಾಲೆಹೊಸೂರು ಗ್ರಾಮ ಘಟಕದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಲೋಕೇಶ್ ಜಾಲವಾಡಗಿ ಮಾತನಾಡಿ, ಅತಿವೃಷ್ಟಿಯಿಂದ ರೈತರ ಹೊಲದಲ್ಲಿ ಬೆಳೆದು ನಿಂತ ಮುಂಗಾರಿನ ಫಸಲು ನೆಲಕ್ಕೆ ಬಿದ್ದು ಹಾಳಾಗಿದೆ. ಹಿಂಗಾರಿನ ಸಣ್ಣ ಬೆಳೆ ಮಳೆಯ ಹೊಡೆತಕ್ಕೆ ಸಿಲುಕಿದೆ. ಪ್ರತಿವರ್ಷ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ರೈತರು ಹಾನಿ ಅನುಭವಿಸುವುದು ತಪ್ಪದಂತಾಗಿದೆ. ಶೇಂಗಾ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗೆ ಮಾತ್ರ ಪರಿಹಾರ ಕೊಡುವರೆಂಬ ಆತಂಕದಲ್ಲಿ ರೈತರಿದ್ದಾರೆ. ಆದ್ದರಿಂದ ಗೋವಿನಜೋಳ,
ತೊಗರಿ ಸೇರಿ ಎಲ್ಲ ಬೆಳೆಗಳ ಹಾನಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ವರ್ಷಗಳ ಹಿಂದೆಯೇ ಬಾಲೆಹೊಸೂರ ಗ್ರಾಮದ ಅನೇಕ ರೈತರ ಜಮೀನುಗಳಿಗೆ ವರದಾ ನದಿಯ ನೀರು ಹರಿದು ಬೆಳೆಹಾನಿಯಾದದ ಬಗ್ಗೆ ಪರಿಹಾರ ಗಗನ ಕುಸುಮವಾಗಿದೆ. ಬೆಳೆಹಾನಿಯ ಜತೆಗೆ ಮನೆ ಬಿದ್ದು ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೂ ಸರಕಾರ ಕೂಡಲೇ ಸ್ಪಂದಿಸುವುದು ಅವಶ್ಯವಾಗಿದೆ.
ರೈತರ ಜಮೀನುಗಳಿಗೆ ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ಸಮೀಕ್ಷೆ ಪೂರ್ಣಗೊಳಿಸಿದರೆ ರೈತರು ಜಮೀನು ಹಸನು ಮಾಡಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ರೇಣುಕಾ ಮನವಿ ಸ್ವೀಕರಿಸಿದರು. ರೈತ ಸಂಘದ ಕಾರ್ಯದರ್ಶಿ ಕೇಶವ ಕಟ್ಟಿಮನಿ, ಸಂಘದ ಸದಸ್ಯರಾದ ಮಂಜುನಾಥ ಸುಣಗಾರ, ವೆಂಕಟೇಶ ಕಾಗನೂರ, ಹನುಮಂತಪ್ಪ ನಾವ್ಹಿ, ಬಸವರಡ್ಡಿ ಚನ್ನಳ್ಳಿ, ತಿರಕಪ್ಪ ಶಿಗ್ಲಿ, ಮಲ್ಲೇಶಪ್ಪ ತಿರಕಣ್ಣವರ, ಪ್ರಸನ್ನ ಲೋಹಾರ, ಹೊನಕೇರಪ್ಪ ಒಂಟಿ, ದರಿಯಪ್ಪ ಪಶುಪತಿಹಾಳ ಇತರರಿದ್ದರು.